ADVERTISEMENT

ಹಸಿರುಮನೆ ಅನಿಲ ಹೊರಸೂಸುವಿಕೆ ತಡೆಗೆ ’ಕಾರ್ಬನ್‌ ಟ್ಯಾಕ್ಸ್‌’: ಐಎಂಎಫ್‌ ಸಲಹೆ

ಏಜೆನ್ಸೀಸ್
Published 4 ಮೇ 2019, 11:28 IST
Last Updated 4 ಮೇ 2019, 11:28 IST
   

ವಾಷಿಂಗ್ಟನ್‌: ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತಗೊಳಿಸಲು ’ಇಂಗಾಲದ ಮೇಲಿನ ತೆರಿಗೆ’(ಕಾರ್ಬನ್‌ ಟ್ಯಾಕ್ಸ್‌) ವಿಧಿಸುವುದು ಉತ್ತಮ ಮಾರ್ಗಗಳಲ್ಲೊಂದು ಎಂದುಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ವರದಿಯಲ್ಲಿ ಹೇಳಿದೆ.

ಶುಕ್ರವಾರ ಐಎಂಎಫ್‌ ವರದಿ ಪ್ರಕಟಗೊಂಡಿದ್ದು,ಪ್ರತಿ ಟನ್‌ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಗೆ70 ಅಮೆರಿಕನ್‌ ಡಾಲರ್‌(₹4,840) ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಆದರೆ ಪ್ರಸ್ತುತ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕಾರ್ಬನ್‌ ಟ್ಯಾಕ್ಸ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿಲ್ಲ. ಫ್ರಾನ್ಸ್‌ನಲ್ಲಿ ಕಾರ್ಬನ್‌ ಟ್ಯಾಕ್ಸ್‌ನ್ನು 44.60 ಯೂರೋದಿಂದ(₹3,459) 55 ಯೂರೋಗಳಿಗೆ(₹4,265) ಏರಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು(ಹಳದಿ ಉಡುಗೆ ಪ್ರತಿಭಟನೆ) ನಡೆದಿದ್ದವು. ಜನರು ದಂಗೆ ಎದ್ದು ಪ್ರತಿಭಟನೆಗಳಲ್ಲಿ ತೊಡಗುತ್ತಿದ್ದಂತೆ ಫ್ರಾನ್ಸ್‌ ಸರ್ಕಾರ ತೆರಿಗೆ ಹೆಚ್ಚಿಸುವ ತನ್ನ ಯೋಜನೆಯನ್ನು ಅನಿವಾರ್ಯವಾಗಿ ಕೈಬಿಟ್ಟಿತು.

ADVERTISEMENT
ಹಳದಿ ಉಡುಗೆ(ಯೆಲೊ ವೆಸ್ಟ್‌) ಪ್ರತಿಭಟನೆ

‘2 ಡಿಗ್ರಿ ಸೆಲ್ಸಿಯಸ್‌ ಕಡಿವಾಣದ ಗುರಿಗಾಗಿ 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸುವ ಅಗತ್ಯವಿದೆ ಹಾಗೂ ಪ್ರತಿ ಟನ್‌ ಇಂಗಾಲಕ್ಕೆ70 ಅಮೆರಿಕನ್‌ ಡಾಲರ್‌(₹4,840) ವಿಧಿಸಬಹುದು’ ಎಂದು ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿನ್‌ ಲಗಾರ್ಡ್‌ ಮತ್ತು ಐಎಂಎಫ್‌ ಆರ್ಥಿಕ ವ್ಯವಹಾರಗಳ ಮುಖ್ಯಸ್ಥ ವಿಟರ್‌ ಗಾಸ್ಪರ್‌ ಹೇಳಿದ್ದಾರೆ.

ಐಎಂಎಫ್‌ ವರದಿ ಪ್ರಕಾರ, ಚೀನಾ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಕಲ್ಲಿದ್ದಲಿನ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ಈ ರಾಷ್ಟ್ರಗಳಲ್ಲಿ ಪ್ರತಿ ಟನ್‌ ಕಾರ್ಬನ್‌ ಹೊರಸೂಸುವಿಕೆಗೆ ಕೇವಲ 35 ಡಾಲರ್‌(₹2,421) ತೆರಿಗೆ ವಿಧಿಸಿದರೂ, ಕಾರ್ಬನ್‌ ಹೊರಸೂಸೂವಿಕೆಯನ್ನು ಶೇ 30ರಷ್ಟು ಕಡಿತಗೊಳಿಸಬಹುದು ಎಂದಿದೆ.

ಐವರಿ ಕೋಸ್ಟ್‌, ಕೋಸ್ಟಾ ರಿಕಾ ಅಥವಾ ಫ್ರಾನ್ಸ್‌ ಸೇರಿದಂತೆ ಒಂಬತ್ತು ರಾಷ್ಟ್ರಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಕಾರ್ಬನ್‌ ಹೊರಸೂಸುವಿಕೆಯಲ್ಲಿ ಕಡಿತಗೊಂಡಿರುವ ಪ್ರಮಾಣ ಶೇ 10ರಷ್ಟು ಮಾತ್ರ.

ಇಂಗಾಲಕ್ಕೆ ತೆರಿಗೆ ವಿಧಿಸುವ ಮೂಲಕ ಇಂಧನ ಬಳಕೆ ಕಡಿತಗೊಳಿಸಬಹುದು, ಮಾಲಿನ್ಯರಹಿತ ಇಂಧನಗಳ ಬಳಕೆ ಉತ್ತೇಜಿಸಬಹುದು ಹಾಗೂ ದೇಶಕ್ಕೆ ಈ ಮೂಲಕ ದೊರೆಯುವ ಆದಾಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಐಎಂಎಫ್‌ ಅಭಿಪ್ರಾಯ ಪಟ್ಟಿದೆ.

200ಕ್ಕೂ ಹೆಚ್ಚು ರಾಷ್ಟ್ರಗಳು 2015ರಿಂದ ಪ್ಯಾರಿಸ್‌ ಒಪ್ಪಂದಕ್ಕೆ ಬದ್ಧರಾಗುವ ಮೂಲಕ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವಂತೆ ಕ್ರಮವಹಿಸುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.