ADVERTISEMENT

ವಿಮಾನ ನಿಲ್ದಾಣದಲ್ಲಿ ಭಾರತದ ಮಹಿಳೆಗೆ ಕಿರುಕುಳ ಘಟನೆ: ಆರೋಪ ಅಲ್ಲಗಳೆದ ಚೀನಾ

ಪಿಟಿಐ
Published 25 ನವೆಂಬರ್ 2025, 14:06 IST
Last Updated 25 ನವೆಂಬರ್ 2025, 14:06 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ಬೀಜಿಂಗ್‌: ಭಾರತದ ಪಾಸ್‌ಪೋರ್ಟ್‌ ಹೊಂದಿದ್ದ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರಿಗೆ ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಚೀನಾ ಮಂಗಳವಾರ ಅಲ್ಲಗಳೆದಿದೆ.

ಶಾಂಘೈ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್‌ ಅನ್ನು ಪರಿಗಣಿಸಲು ನಿರಾಕರಿಸಿ 18 ತಾಸು ವಶಕ್ಕೆ ಪಡೆದಿದ್ದರು ಎಂದು ಬ್ರಿಟನ್‌ನಲ್ಲಿ ನೆಲಸಿರುವ ಅರುಣಾಚಲ ಪ್ರದೇಶದ ಪೆಮಾ ವಾಂಗ್‌ಜೊಮ್‌ ತೊಂಗ್‌ಡಾಕ್‌ ಎಂಬವರು ಸೋಮವಾರ ಆರೋಪಿಸಿದ್ದರು. 

ADVERTISEMENT

‘ಜನ್ಮಸ್ಥಳವನ್ನು ಅರುಣಾಚಲ ಪ್ರದೇಶ ಎಂದು ದಾಖಲಿಸಲಾಗಿದೆ. ಹೀಗಾಗಿ ಪಾಸ್‌ಪೋರ್ಟ್ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಅರುಣಾಚಲ ಪ್ರದೇಶ ಚೀನಾದ ಭಾಗ ಎಂದು ಹೇಳಿದ ಅಧಿಕಾರಿಗಳು, ಅದನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಯಾವುದೇ ವಿವರಣೆ ನೀಡದೆ 18 ತಾಸು ವಶಕ್ಕೆ ಪಡೆದಿದ್ದರು’ ಎಂದು ‘ಎಕ್ಸ್’ನಲ್ಲಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್, ಮಹಿಳೆ ಆರೋಪಿಸಿದಂತೆ ಯಾವುದೇ ಬಲವಂತದ ಕ್ರಮ, ಬಂಧನ ಅಥವಾ ಶೋಷಣೆ ನಡೆದಿಲ್ಲ ಎಂದಿದ್ದಾರೆ. 

‘ಚೀನಾದ ವಲಸೆ ಅಧಿಕಾರಿಗಳು ಕಾನೂನು ಮತ್ತು ನಿಯಮಗಳ ಪ್ರಕಾರವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆ ಮಹಿಳೆಯ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿದ್ದಾರೆ ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ. ವಿಮಾನಯಾನ ಸಂಸ್ಥೆಯು ಸಂಬಂಧಪಟ್ಟ ವ್ಯಕ್ತಿಗೆ ವಿಶ್ರಾಂತಿ ಪಡೆಯಲು ಸ್ಥಳ, ಪಾನೀಯ ಮತ್ತು ಆಹಾರ ಒದಗಿಸಿದೆ’ ಎಂದು ಹೇಳಿದರು.

ಝಾಂಗ್‌ನಾನ್‌ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟ ಹೆಸರು) ಮೇಲೆ ಚೀನಾ ಹೊಂದಿರುವ ಹಕ್ಕುಗಳನ್ನು ಅವರು ಪುನರುಚ್ಚರಿಸಿದರು. ‘ಝಾಂಗ್‌ನಾನ್‌ ಚೀನಾಕ್ಕೆ ಸೇರಿದ ಪ್ರದೇಶ. ಭಾರತವು ಅಕ್ರಮವಾಗಿ ವಶಪಡಿಸಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಚೀನಾ ಯಾವುದೇ ಮಾನ್ಯತೆ ನೀಡುವುದಿಲ್ಲ’ ಎಂದರು. 

ಪ್ರತಿಭಟನೆ ಸಲ್ಲಿಸಿದ ಭಾರತ: ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಚೀನಾಕ್ಕೆ ಈಗಾಗಲೇ ತನ್ನ ಪ್ರತಿಭಟನೆ ಸಲ್ಲಿಸಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ. ಶಾಂಘೈನಲ್ಲಿರುವ ಭಾರತದ ಕಾನ್ಸುಲೇಟ್‌, ಮಹಿಳೆಗೆ ಅಗತ್ಯ ನೆರವು ಒದಗಿಸಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.