ADVERTISEMENT

China Taiwan Conflict: ತೈವಾನ್‌ ಸುತ್ತ ಚೀನಾ ಮಿಲಿಟರಿ ತಾಲೀಮು

ಏಜೆನ್ಸೀಸ್
Published 29 ಡಿಸೆಂಬರ್ 2025, 15:38 IST
Last Updated 29 ಡಿಸೆಂಬರ್ 2025, 15:38 IST
   

ಹಾಂಗ್‌ಕಾಂಗ್‌: ದ್ವೀಪ ರಾಷ್ಟ್ರ ತೈವಾನ್‌ ಸುತ್ತ ತಾಲೀಮು ನಡೆಸುವುದಕ್ಕಾಗಿ ಚೀನಾ ಸೇನೆಯು ವಾಯುಪಡೆ, ನೌಕಾಪಡೆ ಹಾಗೂ ರಾಕೆಟ್‌ಗಳ ತುಕಡಿಗಳನ್ನು ಸೋಮವಾರ ನಿಯೋಜಿಸಿದೆ.

ಇನ್ನೊಂದೆಡೆ, ‘ಶಾಂತಿಯನ್ನು ನಾಶ ಮಾಡುವ ದೊಡ್ಡ ವಿನಾಶಕಾರಿ ಶಕ್ತಿಯೇ ಚೀನಾ ಸರ್ಕಾರ’ ಎಂದು ಹೇಳಿರುವ ತೈವಾನ್, ತನ್ನ ಭದ್ರತಾಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದಾಗಿ ಹೇಳಿದೆ.

ಅಮೆರಿಕ ಇತ್ತೀಚೆಗೆ ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿತ್ತು. ಒಂದು ವೇಳೆ ತೈವಾನ್‌ ಮೇಲೆ ಚೀನಾ ದಾಳಿ ನಡೆಸಿದಲ್ಲಿ ತನ್ನ ಮಿಲಿಟರಿ ಈ ಸಂಘರ್ಷದಲ್ಲಿ ಧುಮುಕಲಿದೆ ಎಂದು ಜಪಾನ್‌ ಹೇಳಿತ್ತು. 

ADVERTISEMENT

‘ಪ್ರತ್ಯೇಕತೆಗೆ ಕುಮ್ಮಕ್ಕು ನೀಡುವ ಮತ್ತು ಹಸ್ತಕ್ಷೇಪ ಮಾಡುತ್ತಿರುವ ‘ಬಾಹ್ಯ ಶಕ್ತಿ’ಗಳಿಗೆ ಎಚ್ಚರಿಕೆ ನೀಡುವ ಭಾಗವಾಗಿ ನಮ್ಮ ಪಡೆಗಳನ್ನು ತೈವಾನ್‌ ಸುತ್ತ ಜಮಾಯಿಸಲಾಗಿದೆ’ ಎಂದು ಹೇಳುವ ಮೂಲಕ, ಅಮೆರಿಕ ಹಾಗೂ ಜಪಾನ್‌ ದೇಶಗಳಿಗೆ ಚೀನಾ ಸ್ಪಷ್ಟ ಸಂದೇಶ ನೀಡಿದೆ.

ಚೀನಾ ಕೈಗೊಂಡಿರುವ ಸಮರಾಭ್ಯಾಸದಿಂದಾಗಿ ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಇಲ್ಲವೇ ಮಾರ್ಗ ಬದಲಾಯಿಸಲಾಗಿದೆ. ಈ ಕ್ರಮದಿಂದ ಲಕ್ಷಕ್ಕೂ ಅಧಿಕ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ತೊಂದರೆಯಾಗಲಿದೆ ಎಂದು ತೈವಾನ್‌ನ ವಿಮಾನಯಾನ ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.