ADVERTISEMENT

ಕಿಮ್‌ ಜಾಂಗ್‌ ಉನ್‌ ಅನಾರೋಗ್ಯ| ಉತ್ತರ ಕೊರಿಯಾಕ್ಕೆ ಚೀನಾದ ವೈದ್ಯರ ತಂಡ 

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 7:02 IST
Last Updated 25 ಏಪ್ರಿಲ್ 2020, 7:02 IST
   

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾದ ಕಿಮ್‌ ಜಾಂಗ್‌ ಉನ್‌ ಬಗ್ಗೆ ಸಲಹೆ ನೀಡಲು ಚೀನಾದ ವೈದ್ಯರು, ಅಧಿಕಾರಿಗಳ ತಂಡ ಗುರುವಾರ ಉತ್ತರ ಕೊರಿಯಾಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದ ತೀರ ಹತ್ತಿರದ ಮೂವರ ಮಾಹಿತಿ ಆಧರಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ ಶನಿವಾರ ವರದಿ ಪ್ರಕಟಿಸಿದೆ.

ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಅಪಾಯದಲ್ಲಿದ್ದಾರೆ ಎಂಬುದು ಇತ್ತೀಚೆಗೆ ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿತ್ತು. ಈ ಮಧ್ಯೆ ಚೀನಾ ತನ್ನ ಮಿತ್ರ ರಾಷ್ಟ್ರದ ನಾಯಕನ ನೆರವಿಗೆ ಧಾವಿಸಿದೆ. ಅದಕ್ಕಾಗಿ ವೈದ್ಯರ ತಂಡವನ್ನು ರವಾನಿಸಿದೆ. ಆದರೆ, ಚೀನಾದ ವೈದ್ಯರು ಉತ್ತರ ಕೊರಿಯಾಕ್ಕೆ ತೆರಳುತ್ತಿರುವುದರ ಹಿನ್ನೆಲೆಯಲ್ಲಿ ಕಿಮ್‌ ಸದ್ಯದ ಆರೋಗ್ಯ ಪರಿಸ್ಥಿತಿಯನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್‌ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ADVERTISEMENT

ಚೀನಾದ ಕಮ್ಯುನಿಸ್ಟ್‌ ಪಕ್ಷದ ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿಯು ವೈದ್ಯರು, ಅಧಿಕಾರಿಗಳ ತಂಡದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದ್ದು, ಗುರುವಾರ ಬೀಜಿಂಗ್‌ನಿಂದ ಉತ್ತರ ಕೊರಿಯಾಕ್ಕೆ ತೆರಳಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಹತ್ತಿರದಿಂದ ಗಮನಿಸಿರುವ ಇಬ್ಬರು ವ್ಯಕ್ತಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆಯಲು ರಾಯಿಟರ್ಸ್‌ ಚೀನಾದ ಸಂವಹನ ವಿಭಾಗವನ್ನು ಸಂಪರ್ಕಿಸಿದೆಯಾದರೂ, ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅಲ್ಲದೆ, ಚೀನಾದ ವಿದೇಶಾಂಗ ಸಚಿವರೂ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಉತ್ತರ ಕೊರಿಯಾ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ಏ. 12ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅಪಾಯದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಸೋಲ್‌ನಲ್ಲಿರುವ ಡೈಲಿ ಎನ್‌.ಕೆ ವರದಿ ಮಾಡಿತ್ತು. ಅಲ್ಲಿಂದೀಚೆಗೆ ಕಿಮ್‌ ಜಾಂಗ್‌ ಉನ್‌ ಆರೋಗ್ಯದ ವಿಚಾರವಾಗಿ ಜಗತ್ತಿನಾದ್ಯಂತ ಕುತೂಹಲ ಮೂಡಿದೆ. ಇಷ್ಟಾದರೂ, ಉತ್ತರ ಕೊರಿಯಾ ಕೂಡ ತನ್ನ ನಾಯಕನ ಆರೋಗ್ಯ ಪರಿಸ್ಥಿತಿಯ ಕುರಿತು ಈ ವರೆಗೆ ಏನನ್ನೂ ಹೇಳಿಲ್ಲ.

ನಾಯಕರ ಮಾಹಿತಿ ಗೌಪ್ಯವಾಗಿಡುವ ಉತ್ತರ ಕೊರಿಯಾ

ಉತ್ತರ ಕೊರಿಯಾ ತನ್ನ ನಾಯಕರ ಆರೋಗ್ಯ, ಸಾವಿನ ವಿಚಾರದಲ್ಲಿ ಹಿಂದಿನಿಂದಲೂ ಗೌಪ್ಯ ಕಾಯ್ದುಕೊಂಡು ಬಂದ ಪರಿಪಾಠವಿದಿದೆ. ಕಿಮ್‌ ಜಾಂಗ್‌ ಉನ್‌ ಅವರ ಅಜ್ಜ, ಕಿಮ್‌ ಸುಂಗ್‌ ಅವರ ಅನಾರೋಗ್ಯದ ವಿಚಾರವನ್ನೂ ಬಹುಕಾಲದ ವರೆಗೆ ಮುಚ್ಚಿಡಲಾಗಿತ್ತು. ಕಿಮ್‌ ಜಾಂಗ್‌ ಉನ್‌ ಅವರ ತಂದೆ ಕಿಮ್‌ ಜಾಂಗ್‌ ಇಲ್‌ ಅವರ ಅನಾರೋಗ್ಯ, ಸಾವಿನ ಬಗ್ಗೆ ವಿಶ್ವಾದ್ಯಂತ ಹಲವು ವರದಿಗಳು ಪ್ರಕಟವಾಗಿದ್ದವು. ಆದರೆ, 2011ರಲ್ಲಿ ಅಧಿಕೃತವಾಗಿ ಕಿಮ್‌ ಜಾಂಗ್‌ ಇಲ್‌ ಅವರ ಸಾವಿನ ಸುದ್ದಿ ಹೊರಬಿದ್ದಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.