ADVERTISEMENT

ಶಾಂಘೈ: ನಿಲ್ಲದ ಓಮೈಕ್ರಾನ್ ಅಬ್ಬರ, ಲಾಕ್‌ಡೌನ್‌ ವೇಳೆ ಕೋವಿಡ್‌ನಿಂದ ಮೊದಲ ಸಾವು

ಏಜೆನ್ಸೀಸ್
Published 18 ಏಪ್ರಿಲ್ 2022, 2:50 IST
Last Updated 18 ಏಪ್ರಿಲ್ 2022, 2:50 IST
ಶಾಂಘೈನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಲು ಸಾಲುಗಟ್ಟಿರುವ ಸ್ಥಳೀಯರು
ಶಾಂಘೈನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಲು ಸಾಲುಗಟ್ಟಿರುವ ಸ್ಥಳೀಯರು   

ಬೀಜಿಂಗ್‌: ಕೋವಿಡ್‌ ವ್ಯಾಪಿಸುವುದನ್ನು ತಡೆಯಲು ಲಾಕ್‌ಡೌನ್‌ಗೆ ಒಳಗಾಗಿರುವ ಶಾಂಘೈ ನಗರದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಮೂವರು ಸಾವಿಗೀಡಾಗಿರುವುದು ವರದಿಯಾಗಿದೆ. ಲಾಕ್‌ಡೌನ್‌ ಶುರುವಾದ ನಂತರ ಕೋವಿಡ್‌ನಿಂದಾಗಿ ಮೊದಲ ಬಾರಿಗೆ ಸಾವು ಸಂಭವಿಸಿದೆ.

ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಸೋಮವಾರ ಕೋವಿಡ್‌ ದೃಢಪಟ್ಟ 22,248 ಹೊಸ ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 2,417 ಮಂದಿಗೆ ಸೋಂಕು ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ಕೋವಿಡ್‌ ಕಾರಣಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 89 ವರ್ಷ ಮತ್ತು 91 ವರ್ಷದ ಇಬ್ಬರು ಮಹಿಳೆಯರು ಹಾಗೂ 91 ವರ್ಷ ವಯಸ್ಸಿನ ಒಬ್ಬ ಪುರುಷ ಮೃತಪಟ್ಟಿದ್ದಾರೆ. ಅವರು ಹೃದಯ ಸಂಬಂಧಿತ ಕಾಯಿಲೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು.

ADVERTISEMENT

ಈಗ ಚೀನಾದಲ್ಲಿ ಓಮೈಕ್ರಾನ್‌ ಸೋಂಕು ವ್ಯಾಪಿಸಿದೆ. ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳು ಪೂರೈಕೆಯಾಗದೆ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು.

ಸಾಮೂಹಿಕ ಕೋವಿಡ್‌ ಪರೀಕ್ಷೆ, ನಿಗದಿತ ಪ್ರದೇಶಗಳಲ್ಲಿ ಲಾಕ್‌ಡೌನ್‌ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಚೀನಾ ಹಲವು ಪ್ರದೇಶಗಳಲ್ಲಿ ಅನುಸರಿಸುತ್ತಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.