ADVERTISEMENT

ಪಾಕಿಸ್ತಾನಕ್ಕೆ 25 ಜೆ–10ಸಿ ಯುದ್ಧ ವಿಮಾನಗಳನ್ನು ನೀಡಲಿದೆ ಚೀನಾ

ಐಎಎನ್ಎಸ್
Published 21 ಫೆಬ್ರುವರಿ 2022, 14:15 IST
Last Updated 21 ಫೆಬ್ರುವರಿ 2022, 14:15 IST
   

ಇಸ್ಲಾಮಾಬಾದ್‌: ಮುಂಬರುವ ಕೆಲವೇ ವಾರಗಳಲ್ಲಿ ಚೀನಾ 25 ಅತ್ಯಾಧುನಿಕ ಜೆ–10ಸಿ ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಿದೆ ಎಂದು ಬ್ರಿಟನ್‌ನ ‘ಫೈನಾನ್ಶಿಯಲ್‌ ಟೈಮ್ಸ್‌’ ಸೋಮವಾರ ವರದಿ ಮಾಡಿದೆ.

ಈ ಯುದ್ಧ ವಿಮಾನಗಳು ಪಾಕಿಸ್ತಾನದ ವಾಯು ಪ್ರದೇಶದ ರಕ್ಷಣೆ ಮತ್ತು ಮಿಲಿಟರಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೊದಲ ಹಂತದ ಯುದ್ಧ ವಿಮಾನಗಳನ್ನು ಅದರ ತಯಾರಕ ಸಂಸ್ಥೆಯಾದ ‘ಚೆಂಗ್ಡು ಏರೋಸ್ಪೇಸ್ ಕಾರ್ಪೊರೇಶನ್‌’ ಚೆಂಗ್ಡುವಿನಲ್ಲಿ ಪರೀಕ್ಷೆ ನಡೆಸುತ್ತಿದೆ ಎಂದು ‘ಫೈನಾನ್ಶಿಯಲ್‌ ಟೈಮ್ಸ್‌’ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ADVERTISEMENT

‘ಪಾಕಿಸ್ತಾನದ ವಾಯುಪಡೆಯ ಪೈಲಟ್‌ಗಳು ಮತ್ತು ತಂತ್ರಜ್ಞರು ವಿಮಾನದ ಕುರಿತು ಮಾಹಿತಿ ಪಡೆಯುವ ಕಾರ್ಯ ಪೂರ್ಣಗೊಂಡ ಬಳಿಕ, ಚೀನಾವು ಪಾಕಿಸ್ತಾನಕ್ಕೆ ವಿಮಾನಗಳನ್ನು ವರ್ಗಾಯಿಸಲಿದೆ’ ಎಂದು ಚೀನಾದ ಮಿಲಿಟರಿ ಪ್ರಕಟಣೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜೆಟ್‌ಗಳು ಈ ತಿಂಗಳ ಅಂತ್ಯದ ವೇಳೆ ಲಭ್ಯವಾಗಲಿವೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ವಾಯುಪಡೆಯ ಗುರುತು ಹೊಂದಿರುವ ಜೆ-10ಸಿ ಫೈಟರ್ ಜೆಟ್‌ನ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದವು ಮತ್ತು ಮಾಧ್ಯಮಗಳು ಅವುಗಳನ್ನು ಬಿತ್ತರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.