ADVERTISEMENT

ಗಡಿ ಉದ್ವಿಗ್ನತೆ ತಣ್ಣಗಾಗಿಸಲು ಉಭಯ ಪಡೆಗಳ ನಿರ್ಧಾರ

ಪಿಟಿಐ
Published 23 ಜೂನ್ 2020, 12:54 IST
Last Updated 23 ಜೂನ್ 2020, 12:54 IST
ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್
ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್   

ಬೀಜಿಂಗ್: ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಭಾರತ ಹಾಗೂ ಚೀನಾದ ಸೇನಾಪಡೆಗಳು ಬಂದಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.

ಎರಡೂ ಕಡೆಗಳ ಉದ್ವಿಗ್ನತೆ ಶಮನ ಮಾಡುವ ಉದ್ದೇಶದಿಂದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಟಿಬೆಟ್‌ನ ಮೇಜರ್ ಜನರಲ್ ಲು ಲಿನ್ ನಡುವೆ ಸೋಮವಾರ ಸುದೀರ್ಘ 11 ಗಂಟೆ ಮಾತುಕತೆ ನಡೆಯಿತು.

ಜೂನ್ 22ರಂದು ಕಮಾಂಡರ್ ಹಂತದ ಮಾತುಕತೆ ನಡೆದು, ಪರಸ್ಪರರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು.

ADVERTISEMENT

‘ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ಕಡೆಯ ಪ್ರತಿನಿಧಿಗಳು ಒಲವು ವ್ಯಕ್ತಪಡಿಸಿದರು’ ಎಂದು ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದಾರೆ.

‘ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಮೂಡಿದ್ದ ಒಮ್ಮತದ ನಿರ್ಧಾರ ಆಧರಿಸಿ, ಎರಡೂ ಕಡೆಯವರು ಸಮಗ್ರ ಅಭಿಪ್ರಾಯಗಳನ್ನು ಹಂಚಿಕೊಂಡರು. ಪರಿಸ್ಥಿತಿಯನ್ನು ತಣ್ಣಗಾಗಿಸುವ ಕ್ರಮ ತೆಗೆದುಕೊಳ್ಳಲು ಒಪ್ಪಿಕೊಳ್ಳಲಾಯಿತು’ ಎಂದು ಲಿಜಿಯಾನ್ ಹೇಳಿದ್ದಾರೆ.

ಗಡಿಯಿಂದ ಸೇನಾಪಡೆಗಳು ಹಿಂದೆ ಸರಿಯಲು ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳು ಇನ್ನೂ ಚರ್ಚೆಯ ಹಂತದಲ್ಲಿವೆ. ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಚೀನಾ ವಕ್ತಾರರು ಹೇಳಿದ್ದಾರೆ.

ಜೂನ್ 15ರಂದು ಲಡಾಖ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಕಡೆಯ 40 ಯೋಧರು ಮೃತಪಟ್ಟಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಲಿಜಿಯಾನ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.