ADVERTISEMENT

FIFA WC | ಮಾಸ್ಕ್ ಧರಿಸದ ಅಭಿಮಾನಿಗಳ ದೃಶ್ಯಗಳಿಗೆ ಚೀನಾ ಟಿವಿಗಳಲ್ಲಿ ಕತ್ತರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2022, 13:21 IST
Last Updated 27 ನವೆಂಬರ್ 2022, 13:21 IST
ಕತಾರ್‌ ಹಾಗೂ ಈಕ್ವೆಡಾರ್ ನಡುವಣ ಪಂದ್ಯದ ನೋಟ (ಪಿಟಿಐ ಚಿತ್ರ)
ಕತಾರ್‌ ಹಾಗೂ ಈಕ್ವೆಡಾರ್ ನಡುವಣ ಪಂದ್ಯದ ನೋಟ (ಪಿಟಿಐ ಚಿತ್ರ)   

ಬೀಜಿಂಗ್:ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ನೇರ ಪ್ರಸಾರದ ಸಂದರ್ಭದಲ್ಲಿ ಸೆರೆಯಾಗುವ ಮಾಸ್ಕ್‌ ಧರಿಸದ ಅಭಿಮಾನಿಗಳ ಕ್ಲೋಸ್‌–ಅಪ್‌ ದೃಶ್ಯಗಳಿಗೆ ಕತ್ತರಿ ಹಾಕಲುಚೀನಾ ಪ್ರಸಾರಕರು ಮುಂದಾಗಿದ್ದಾರೆ.

ಚೀನಾದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಾರಿಗೊಳಿಸಲಾಗಿರುವ ಕಠಿಣ ನಿಯಮಗಳ ವಿರುದ್ಧ ಜನರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಪ್ರಸಾರಕರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕಾಗಿ ಈಗಲೂ ಲಾಕ್‌ಡೌನ್‌, ದೀರ್ಘಾವಧಿಯ ಪ್ರತ್ಯೇಕವಾಸ ಹಾಗೂ ಸೋಂಕು ಪರೀಕ್ಷೆ ಅಭಿಯಾನಗಳನ್ನು ನಡೆಸುತ್ತಿರುವಏಕೈಕ ದೊಡ್ಡ ರಾಷ್ಟ್ರವಾಗಿದೆ.

ADVERTISEMENT

ವಿಶ್ವಕಪ್‌ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಜಪಾನ್‌ ಹಾಗೂ ಕೋಸ್ಟರಿಕಾ ತಂಡಗಳು ಭಾನುವಾರ ಮುಖಾಮುಖಿಯಾಗಿದ್ದವು. ಈ ಪಂದ್ಯದ ನೇರಪ್ರಸಾರದ ವೇಳೆ ಸೆರೆಯಾದ ಮಾಸ್ಕ್‌ ಧರಿಸದ ಅಭಿಮಾನಿಗಳ ದೃಶ್ಯಗಳ ಬದಲು ಬೇರೆಬೇರೆ ದೃಶ್ಯಗಳನ್ನುಚೀನಾದ ಪ್ರಮುಖ ಕ್ರೀಡಾ ವಾಹಿನಿ 'ಸಿಸಿಟಿವಿ ಸ್ಪೋರ್ಟ್ಸ್‌' ಪ್ರಸಾರ ಮಾಡಿತ್ತು ಎಂದು ವರದಿಯಾಗಿದೆ.

ಕತಾರ್‌ನಲ್ಲಿ ಭಾರಿ ಸಂಖ್ಯೆಯ ಜನರು ಮೈದಾನಗಳಲ್ಲಿ ಸೇರಿ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯನ್ನು ಸಂಭ್ರಮಿಸುತ್ತಿದ್ದರೆ, ಇತ್ತ ಚೀನಾದಬೀಜಿಂಗ್‌,ಗುವಾಂಗ್‌ಜೌ, ಚಾಂಗ್‌ಜಿಂಗ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್‌ನಂತಹ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.

'ಚೀನಾ ಬೇರೆ ಗ್ರಹದಲ್ಲಿದೆಯೇ?' ಎಂದು ಹಲವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.