ADVERTISEMENT

ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಕಾರ್ಪರ್ಡ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 10:08 IST
Last Updated 2 ಫೆಬ್ರುವರಿ 2026, 10:08 IST
<div class="paragraphs"><p>ವೀರಭದ್ರನ್ ರಾಮನಾಥನ್</p></div>

ವೀರಭದ್ರನ್ ರಾಮನಾಥನ್

   

ಹೂಸ್ಟನ್: ‘ಭೂವಿಜ್ಞಾನದ ನೊಬೆಲ್ ಪ್ರಶಸ್ತಿ’ ಎಂದು ಖ್ಯಾತಿಯಾದ 2026ರ ‘ಕಾರ್ಪರ್ಡ್‌ ಪ್ರಶಸ್ತಿ’ಯು ಅಮೆರಿಕದಲ್ಲಿನ ಭಾರತ ಮೂಲದ ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಸಂದಿದೆ.

ಸ್ವಿಡನ್‌ನ ರಾಯಲ್ ಸ್ವಿಡೀಸ್ ಅಕಾಡೆಮಿ ಕೊಡಮಾಡುವ ಈ ಪ್ರಶಸ್ತಿಯು ಸುಮಾರು ₹6.15 ಕೋಟಿ ನಗದು ಪುರಸ್ಕಾರವನ್ನು ಒಳಗೊಂಡಿದೆ.

ADVERTISEMENT

ರಾಮನಾಥನ್ ಅವರು ಕಳೆದು ಎರಡು ದಶಕಗಳಿಂದ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಸಂಶೋದನೆಗಳನ್ನು ನಡೆಸುತ್ತಿದ್ದಾರೆ. ಅದರಲ್ಲೂ ‘ಕಪ್ಪು ಮೋಡ’ಗಳ ಬಗ್ಗೆ ಅವರು ಹೆಚ್ಚು ಬೆಳಕು ಚೆಲ್ಲಿದ್ದಾರೆ.

82 ವರ್ಷದ ರಾಮನಾಥನ್ ಅವರು ತಮಿಳುನಾಡಿನ ಮದುರೈ ಮೂಲದವರು. ಚೆನ್ನೈನಲ್ಲಿ ವಿದ್ಯಾಬ್ಯಾಸ ಮುಗಿಸಿದ ಅವರು ಆರಂಭದಲ್ಲಿ ಸಿಕಂದರಾಬಾದ್‌ನಲ್ಲಿ ರೆಫ್ರಿಜಿರೇಟರ್ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಣ್ಣಾಮಲೈ ವಿಶ್ವವಿದ್ಯಾಲಯ ಹಾಗೂ ಮದ್ರಾಸ್ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದು ವೀರಭದ್ರನ್ ಅವರು 1970 ರಲ್ಲಿ ಅಮೆರಿಕಕ್ಕೆ ತೆರಳಿದ್ದರು.

1975 ರ ಸಮಯದಲ್ಲಿ ‘ನಾಸಾ‘ದಲ್ಲಿ ಕೆಲಸ ಮಾಡುತ್ತಿರುವಾಗ, ವಾತಾವರಣದಲ್ಲಿ ಕಾರ್ಬನ್ ಡೈ ಆಕೈಡ್‌ಗಿಂತ ರೆಫ್ರಿಜಿರೇಟರ್‌ಗಳಿಂದ ಹೊರಹೊಮ್ಮುವ ಕ್ಲೊರೋಫ್ಲೋರೊ ಕಾರ್ಬನ್ ಸುಮಾರು 10 ಸಾವಿರ ಪಟ್ಟು ಹೆಚ್ಚು ತಾಪಮಾನ ಏರಿಕೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಮಂಡಿಸಿದರು. ಅಲ್ಲಿವರೆಗೂ ಜಗತ್ತಿನ ವಿಜ್ಞಾನಿಗಳು ತಾಪಮಾನ ಏರಿಕೆಗೆ ಕಾರ್ಬನ್ ಡೈ ಆಕೈಡ್‌ನೇ ಪ್ರಮುಖ ಕಾರಣ ಎಂದು ಭಾವಿಸಿದ್ದರು.

ಮುಂದೆ ವೀರಭದ್ರನ್ ಅವರ ಹಲವು ಸಂಶೋಧನೆಗಳೇ ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣದ ಹಲವು ಜಾಗತಿಕ ಒಪ್ಪಂದಗಳಿಗೆ ಕಾರಣವಾದವು.

ಅಷ್ಟೇ ಅಲ್ಲದೇ ವೀರಭದ್ರನ್ ಅವರು ಏಷ್ಯಾದಲ್ಲಿ ಕೈಗೊಂಡ ಭೂ ಅಧ್ಯಯನ, ಪರಿಸರ ಅಧ್ಯಯನಗಳು ಜಗತ್ತಿಗೆ ಅಚ್ಚರಿಯ ಸಂಗತಿಗಳನ್ನು ನೀಡಿದವು. ಅತಿಯಾದ ವಾಯುಮಾಲಿನ್ಯದಿಂದ ಭಾರತದ ಮಾನ್ಸೂನ್ ಮಾರುತಗಳ ಮೇಲೆ ಪ್ರಭಾವ ಉಂಟಾಗುತ್ತಿದೆ ಹಾಗೂ ಹಿಮಾಲಯ ಕರಗಲು ಕಾರಣವಾಗುತ್ತಿದೆ ಎಂದು ಹೇಳಿದ್ದರು.

ಸದ್ಯ ಅಮೆರಿಕದ ಹೂಸ್ಟನ್‌ನಲ್ಲಿ ನೆಲೆಸಿರುವ ಅವರು, ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾದ್ಯಾಪಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.