ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ವಾಯ್ಸ್ ಆಫ್ ಅಮೆರಿಕ ಸೇರಿದಂತೆ ಅಮೆರಿಕದಿಂದ ಹಣಕಾಸು ನೆರವು ಪಡೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವ ಪ್ರಕ್ರಿಯೆಯನ್ನು ಡೊನಾಲ್ಡ್ ಟ್ರಂಪ್ ಆಡಳಿತ ಭಾನುವಾರ ಆರಂಭಿಸಿದೆ.
ಉದ್ಯೋಗಿಗಳನ್ನು ರಜೆಯಲ್ಲಿ ಕಳುಹಿಸಿದ ಬೆನ್ನಲ್ಲೇ, ಮಾರ್ಚ್ ತಿಂಗಳ ಅಂತ್ಯದ ಬಳಿಕ ನಿಮ್ಮನ್ನು ವಜಾ ಮಾಡಲಾಗುವುದು ಎನ್ನುವ ಇ–ಮೇಲ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಕಳುಹಿಸಲಾಗಿದೆ.
‘ನಿಮ್ಮ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಸಂಸ್ಥೆಯ ಯಾವುದೇ ಕಟ್ಟಡಗಳ ಪ್ರವೇಶ ಹಾಗೂ ಪೀಠೋಪಕರಣ ಬಳಕೆಗೆ ಅನುಮತಿ ಇಲ್ಲ’ ಎಂದು ಇ–ಮೇಲ್‌ನಲ್ಲಿ ಹೇಳಲಾಗಿದೆ.
ವಾಯ್ಸ್ ಆಫ್ ಅಮೆರಿಕ ದೊಡ್ಡ ಪ್ರಮಾಣದ ಉದ್ಯೋಗಿಗಳು ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದು, ಇಂಗ್ಲೀಷೇತರ ಭಾಷೆಗಳಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿದ್ದಾರೆ. ವಜಾಗೊಂಡ ಉದ್ಯೋಗಿಗಳ ನಿಖರ ಸಂಖ್ಯೆ ಗೊತ್ತಾಗಿಲ್ಲ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಅಮೆರಿಕ ನಾಗರಿಕರಲ್ಲ. ಇದೀಗ ಉದ್ಯೋಗ ನಷ್ಟದಿಂದಾಗಿ ವಿಸಾ ಸಮಸ್ಯೆ ಅವರಿಗೆ ಎದುರಾಗಲಿದೆ.
ವಾಯ್ಸ್ ಆಫ್ ಅಮೆರಿಕದ ಪೂರ್ಣ ಪ್ರಮಾಣದ ಉದ್ಯೋಗಿಗಳಿಗೆ ಕಾನೂನು ರಕ್ಷಣೆ ಇದ್ದು, ಅವರನ್ನು ಕೂಡಲೇ ವಜಾ ಮಾಡಿಲ್ಲ. ಆದರೆ ಅವರನ್ನು ರಜೆಯಲ್ಲಿ ಕಳುಹಿಸಲಾಗಿದ್ದು, ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ.
ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ವಾಯ್ಸ್ ಆಫ್ ಅಮೆರಿಕವನ್ನು ಸ್ಥಾಪಿಸಲಾಗಿತ್ತು. ಜಗತ್ತಿನ 49 ಭಾಷೆಗಳಲ್ಲಿ ಇದು ಲಭ್ಯವಿದೆ.
ರೆಡಿಯೊ ಫ್ರಿ ಯೂರೋಪ್, ರೆಡಿಯೊ ಲಿಬರ್ಟಿ, ರೆಡಿಯೊ ಫ್ರಿ ಏಷ್ಯಾ, ರೆಡಿಯೊ ಫರ್ಡಾ, ಅಲ್ ಹುರ್ರಾ ಮುಂತಾದ ಮಾಧ್ಯಮ ಸಂಸ್ಥೆಗಳ ಉದ್ಯೋಗಿಳನನ್ನೂ ವಜಾ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.