ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕದ ಕರಾವಳಿ ಕಾವಲು ಪಡೆಯ ಮುಖ್ಯಸ್ಥೆ ಅಡ್ಮಿರಲ್ ಲಿಂಡಾ ಲೀ ಫಾಗನ್ ಅವರನ್ನು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾಗೊಳಿಸಿದ್ದಾಗಿ ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಮಂಗಳವಾರ ತಿಳಿಸಿದೆ.
ಲಿಂಡಾ ಅವರು ಅಮೆರಿಕದ ಸಶಸ್ತ್ರ ಪಡೆಯೊಂದರ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಸಮುದ್ರ ಭದ್ರತೆಯ ಜವಾಬ್ದಾರಿ ಹೊತ್ತಿರುವ ಕರಾವಳಿ ಕಾವಲು ಪಡೆಯ ಮುಖ್ಯಸ್ಥರನ್ನಾಗಿ ಲಿಂಡಾ ಅವರನ್ನು 2021ರಲ್ಲಿ ಜೋ ಬೈಡನ್ ನೇಮಕ ಮಾಡಿದ್ದರು.
ಲಿಂಡಾ ಫಾಗನ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಅವರು ದೀರ್ಘ ಹಾಗೂ ಖ್ಯಾತಿ ತುಂಬಿದ ವೃತ್ತಿ ಜೀವನ ನಡೆಸಿದ್ದಾರೆ ಎಂದು ಹೋಮ್‌ಲ್ಯಾಂಡ್ ರಕ್ಷಣಾ ಇಲಾಖೆಯ ಹಂಗಾಮಿ ಕಾರ್ಯದರ್ಶಿ ಬೆಂಜಮಿನ್ ಹುಫ್‌ಮ್ಯಾನ್ ತಿಳಿಸಿದ್ದಾರೆ.
‘ನಾಯಕತ್ವದ ಕೊರತೆ, ಕಾರ್ಯಾಚರಣೆಯ ವೈಫಲ್ಯ ಮತ್ತು ಕರಾವಳಿ ಕಾವಲು ಪಡೆಯ ಕಾರ್ಯತಂತ್ರದ ಉದ್ದೇಶಗಳನ್ನು ಮುನ್ನಡೆಸಲು ಅಸಮರ್ಥರಾಗಿದ್ದರಿಂದ ಲಿಂಡಾ ಅವರನ್ನು ಹುಫ್‌ಮ್ಯಾನ್ ಅವರು ಕರ್ತವ್ಯದಿಂದ ಮುಕ್ತಗೊಳಿಸಿದ್ದಾರೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಲಿಂಡಾ ಅವರ ವೈವಿಧ್ಯತೆ, ಸಮಾನತೆ ಹಾಗೂ ಮತ್ತು ಒಳಗೊಳ್ಳುವ ನೀತಿಯಿಂದಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಲಿಂಡಾ ಅವರು ತಕ್ಷಣಕ್ಕೆ ಲಭ್ಯರಾಗಿಲ್ಲ.
ಸರ್ಕಾರದ ಏಜೆನ್ಸಿಗಳಲ್ಲಿ ಇರುವ ವೈವಿಧ್ಯತೆ, ಸಮಾನತೆ ಹಾಗೂ ಮತ್ತು ಒಳಗೊಳ್ಳುವ ನೀತಿಯನ್ನು ರದ್ದು ಮಾಡಬೇಕು ಎಂದು ಟ್ರಂಪ್ ಹೇಳಿದ್ದರು. ಇದರ ಭಾಗವಾಗಿಯೇ ಲಿಂಡಾ ಅವರ ತಲೆದಂಡವಾಗಿದೆ ಎನ್ನಲಾಗಿದೆ.
ಟ್ರಂಪ್ ಅವರ ನಿರ್ಧಾರವನ್ನು ಡೆಮಾಕ್ರಟಿಕ್ ಪಕ್ಷದ ಸಂಸದ ರಿಕ್ ಲಾರ್ಸೆನ್ ಟೀಕಿಸಿದ್ದು, ‘ಲಿಂಡಾ ಅವರನ್ನು ವಜಾ ಮಾಡುವ ನಿರ್ಧಾರವು ದಾರಿತಪ್ಪಿದೆ ಮತ್ತು ಸನ್ನದ್ಧತೆಗೆ ಹಾನಿ ಮಾಡುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.