ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್ / ವಾಷಿಂಗ್ಟನ್: ಭಾರತದೊಂದಿಗೆ ಅಮೆರಿಕಕ್ಕೆ ವಿಶೇಷ ಸಂಬಂಧ ಇದೆ, ಎರಡೂ ದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ, ಸ್ವಲ್ಪ ಕಾಯಿರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪ್ರತಿ ಸುಂಕ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿ ಸಂಬಂಧ ಭಾರತ ಹಾಗೂ ಅಮೆರಿಕ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಮಧ್ಯೆಯೇ ಟ್ರಂಪ್ ಹೀಗೆ ಹೇಳಿದ್ದಾರೆ.
‘ನಾನು ನರೇಂದ್ರ ಮೋದಿ ಜೊತೆ ಎಂದಿಗೂ ಸ್ನೇಹಿತನಾಗಿರುತ್ತೇನೆ. ಅವರು ಅದ್ಭುತ ಪ್ರಧಾನಿ. ಆದರೆ ಅವರು ಈಗ ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಆದರೂ ಅಮೆರಿಕ ಹಾಗೂ ಭಾರತ ನಡುವೆ ವಿಶೇಷ ಬಾಂಧವ್ಯವಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ. ಸ್ವಲ್ಪ ಸಮಯ ಕಾಯಿರಿ’ ಎಂದು ಟ್ರಂಪ್ ಶುಕ್ರವಾರ ತಮ್ಮ ಓವಲ್ ಕಚೇರಿಯಲ್ಲಿ ಹೇಳಿದ್ದಾರೆ.
ಭಾರತ ಜೊತೆಗೆ ಸಂಬಂಧ ಸುಧಾರಣೆಗೆ ಸಿದ್ಧರಿದ್ದೀರಾ ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. ಎರಡು ದಶಕಗಳಲ್ಲಿ ಭಾರತ–ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಗಂಭೀರವಾಗಿ ಬಿಗಡಾಯಿಸಿದೆ.
ರಷ್ಯಾದಿಂದ ಭಾರತವು ಭಾರಿ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ಅವರು ಇದೇ ವೇಳೆ ನುಡಿದಿದ್ದಾರೆ.
‘ಭಾರತವು ರಷ್ಯಾದಿಂದ ಭಾರಿ ಪ್ರಮಾಣದಿಂದ ತೈಲ ಖರೀದಿ ಮಾಡುತ್ತಿರುವುದು ತೀವ್ರ ನಿರಾಶಾದಾಯಕ. ಇದನ್ನೂ ನಾನು ತಿಳಿಸಿದ್ದೇನೆ ಕೂಡ. ನಾವು ಭಾರತಕ್ಕೆ ಶೇ 50ರ ದೊಡ್ಡ ಸುಂಕವನ್ನೂ ಹೇರಿದ್ದೇವೆ. ನನ್ನ ಹಾಗೂ ಮೋದಿ ನಡುವೆ ಉತ್ತಮ ಸಂಬಂಧವಿದೆ. ಎರಡು ತಿಂಗಳ ಹಿಂದೆ ಅವರು ಇಲ್ಲಿಗೆ ಬಂದಿದ್ದರು’ ಎಂದು ಭಾರತದ ಸಂಬಂಧ ಕಳೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಭಾರತ ಹಾಗೂ ಇತರ ದೇಶಗಳ ನಡುವಿನ ವ್ಯಾಪಾರ ಮಾತುಕತೆ ಹೇಗೆ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ, ‘ಅವುಗಳು ಉತ್ತಮವಾಗಿ ಸಾಗುತ್ತಿದೆ. ಎಲ್ಲಾ ರಾಷ್ಟ್ರಗಳೊಂದಿಗೆ ದೊಡ್ಡ ರೀತಿಯಲ್ಲಿ ಸಾಗುತ್ತಿದೆ. ಆದರೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಂದ ಬೇಸರಗೊಂಡಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.