ADVERTISEMENT

ಭಾರತ, ಚೀನಾ ವಿರುದ್ಧ ಶೇ500ರಷ್ಟು ಸುಂಕ ಹೇರಲು ಅವಕಾಶ: ಮಸೂದೆಗೆ ಟ್ರಂಪ್ ಒಪ್ಪಿಗೆ

ಪಿಟಿಐ
Published 8 ಜನವರಿ 2026, 14:42 IST
Last Updated 8 ಜನವರಿ 2026, 14:42 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ನ್ಯೂಯಾರ್ಕ್‌/ ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ಸೂಚಿಸಿದ್ದಾರೆ. 

ರಷ್ಯಾ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವ ಈ ಮಸೂದೆಯು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸುತ್ತಿರುವ ಭಾರತ, ಚೀನಾ ಮತ್ತು ಇತರ ದೇಶಗಳ ಮೇಲೆ ಅತ್ಯಧಿಕ ಸುಂಕ ವಿಧಿಸಲು ಶ್ವೇತಭವನಕ್ಕೆ ಅವಕಾಶ ನೀಡುತ್ತದೆ. 

ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಸೆನೆಟರ್‌ ಲಿಂಡ್ಸೆ ಗ್ರಹಾಂ, ‘ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳು ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿವೆ. ಅದನ್ನು ತಡೆಯುವುದಕ್ಕೆ ಈ ಮಸೂದೆಯು ಶ್ವೇತಭವನಕ್ಕೆ ಅಪರಿಮಿತ ಅಧಿಕಾರ ನೀಡುತ್ತದೆ’ ಎಂದರು.

ADVERTISEMENT

‘ರಷ್ಯಾ ವಿರುದ್ಧದ ದ್ವಿಪಕ್ಷೀಯ ನಿರ್ಬಂಧ ಮಸೂದೆ ಬಗ್ಗೆ ನಾನು, ಸೆನೆಟರ್‌ ಬ್ಲೂಮೆಂಥಾಲ್‌ ಮತ್ತು ಇತರರ ಜತೆಗೆ ಹಲವು ತಿಂಗಳು ಕೆಲಸ ಮಾಡಿದ್ದೇನೆ. ಅಧ್ಯಕ್ಷ ಟ್ರಂಪ್‌ ಅವರ ಜತೆ ಈ ಕುರಿತು ಇಂದು ಮಹತ್ವದ ಸಭೆ ನಡೆಯಿತು. ಅವರು ಈ ಮಸೂದೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಗ್ರಹಾಂ ತಿಳಿಸಿದರು. 

‘ಇದು ಸಂದರ್ಭೋಚಿತ ನಿರ್ಧಾರ. ಉಕ್ರೇನ್‌–ರಷ್ಯಾ ಯುದ್ಧ ನಿಲ್ಲಿಸಲು ಮತ್ತು ಶಾಂತಿ ಸ್ಥಾಪನೆಗೆ ಅಮೆರಿಕ ಸರ್ವ ಪ್ರಯತ್ನ ಮಾಡುತ್ತಿದೆ. ಆದರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮುಗ್ಧರ ಹತ್ಯೆಯನ್ನು ಮುಂದುವರಿಸಿದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಮೂಲಕ ಕೆಲ ದೇಶಗಳು ಯುದ್ಧವನ್ನು ಉತ್ತೇಜಿಸುತ್ತಿವೆ. ಉಕ್ರೇನ್‌ನಲ್ಲಿ ಪುಟಿನ್‌ ಹರಿಸುತ್ತಿರುವ ರಕ್ತಪಾತಕ್ಕೆ ಹಣಕಾಸು ಒದಗಿಸುತ್ತಿವೆ. ಅದನ್ನು ತಡೆಯಲು ಮತ್ತು ತೈಲ ಖರೀದಿ ದೇಶಗಳನ್ನು ಶಿಕ್ಷಿಸಲು ಈ ಮಸೂದೆಯು ಟ್ರಂಪ್‌ ಅವರಿಗೆ ಅಧಿಕಾರ ನೀಡುತ್ತದೆ’ ಎಂದು ಅವರು ವಿವರಿಸಿದರು. 

ಮುಂದಿನ ವಾರದ ಆರಂಭದಲ್ಲಿ ಈ ಮಸೂದೆಗೆ ಎರಡೂ ಪಕ್ಷಗಳ ಸದಸ್ಯರು ಬಹುಮತದಿಂದ ಅಂಗೀಕಾರ ನೀಡುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಗ್ರಹಾಂ ಭರವಸೆ ವ್ಯಕ್ತಪಡಿಸಿದರು. 

ಗ್ರಹಾಂ ಮತ್ತು ಬ್ಲೂಮೆಂಥಾಲ್‌ ಅವರು ಈ ಮಸೂದೆಯನ್ನು ಕಳೆದ ವರ್ಷ ಪರಿಚಯಿಸಿದ್ದರು. ರಷ್ಯಾದಿಂದ ತೈಲ ಖರೀದಿಸುವ ಮತ್ತು ಅದನ್ನು ಮರು ಮಾರಾಟ ಮಾಡುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸುವುದನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದರು. 

ಟ್ರಂಪ್‌ ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕವನ್ನು ಈಗಾಗಲೇ ವಿಧಿಸಿದ್ದಾರೆ. ಇದರಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿರುವುದಕ್ಕೆ ಶೇ 25ರಷ್ಟು ಸುಂಕವೂ ಸೇರಿದೆ.

ನಿತ್ಯ ಹೊಸ ಸವಾಲು: ಕಾಂಗ್ರೆಸ್‌

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಸಂಕಷ್ಟದ ದಿನಗಳನ್ನು ಕಾಣುತ್ತಿದ್ದು ನಿತ್ಯ ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಕಾಂಗ್ರೆಸ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ನಿರ್ಬಂಧಗಳ ಮಸೂದೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲಿಸಿದ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಭಾರತದ ಪ್ರಧಾನಿ ಅವರ ಸಮಾಧಾನಕರ ಪೋಸ್ಟ್‌ಗಳ ಹೊರತಾಗಿಯೂ ಉಭಯ ದೇಶಗಳ ನಡುವಿನ ಸಂಬಂಧಗಳು ಹೊಸ ಅಸಹಜತೆಯ ಹಾದಿ ಹಿಡಿಯುತ್ತಿವೆ. ಇದಕ್ಕೆ ಪ್ರತಿಯಾಗಿ ಟ್ರಂಪ್‌ ಅವರು ಪಾಕಿಸ್ತಾನದ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌ ಅವರನ್ನು ಹೊಗಳುತ್ತಲೇ ಇದ್ದಾರೆ ಎಂದು ಅವರು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.