ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್ / ವಾಷಿಂಗ್ಟನ್: ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರು ಪತ್ನಿ ನಿಂತಿದ್ದ ಎಸ್ಕಲೇಟರ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಘಟನೆ ನಡೆದಿದೆ. ಭಾಷಣ ಮಾಡುವ ವೇಳೆ ಟೆಲಿಪ್ರಾಂಪ್ಟರ್ ಕೂಡ ಕೈಕೊಟ್ಟಿದೆ. ಅಲ್ಲದೆ ಭಾಷಣ ಮಾಡುವ ವೇಳೆ ಸಭಾಂಗಣದಲ್ಲಿ ಧ್ವನಿವರ್ಧಕ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ.
ಇವುಗಳು ‘ಮೂರು ವಿಧ್ವಂಸಕ ಘಟನೆಗಳು’ ಎಂದು ಟ್ರಂಪ್ ಕಿಡಿಕಾರಿದ್ದಾರೆ. ವಿಶ್ವಸಂಸ್ಥೆಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಟ್ರೂಥ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಿನ್ನೆ ವಿಶ್ವಸಂಸ್ಥೆಯಲ್ಲಿ ಒಂದಲ್ಲ, ಎರಡಲ್ಲ, ಮೂರು ಬಾರಿ ಅವಮಾನವಾಯಿತು’ ಎಂದು ಬರೆದಿದ್ದಾರೆ.
ಭಾಷಣ ಮಾಡಬೇಕಾದ ಸಭಾಂಗಣಕ್ಕೆ ಪತ್ನಿ ಮೆಲಾನಿಯ ಅವರೊಂದಿಗೆ ಎಸ್ಕಲೇಟರ್‌ನಲ್ಲಿ ತೆರಳುತ್ತಿದ್ದ ವೇಳೆ, ಅರ್ಧಕ್ಕೆ ಸ್ಥಗಿತಗೊಂಡಿದೆ. ‘ಪುಣ್ಯವಶಾತ್ ನಾವು ಚೂಪಾದ ಅಂಚುಗಳಿದ್ದ ಸ್ಟೀಲ್ ಮೆಟ್ಟಿಲುಗಳ ಮೇಲೆ ಬೀಳಲಿಲ್ಲ. ನಾಬಿಬ್ಬರು ಕೈಕೈ ಹಿಡಿದುಕೊಂಡು ಹ್ಯಾಂಡ್‌ರೈಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆವು. ಇಲ್ಲದಿದ್ದರೆ ದುರಂತ ಸಂಭವಿಸುತ್ತಿತ್ತು. ಇದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಕಾರಣರಾದವರನ್ನು ಬಂಧಿಸಬೇಕು’ ಎಂದು ಟ್ರಂಪ್ ಒತ್ತಾಯಿಸಿದ್ದಾರೆ.
ಬಳಿಕ ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ಪೀಠಕ್ಕೆ ಬಂದಾಗ ಟೆಲಿಪ್ರಾಂಪ್ಟರ್ ಕೂಡ ಕೆಲಸ ನಿರ್ವಹಿಸಲಿಲ್ಲ.
‘ಬಳಿಕ ನಾನು ಭಾಷಣ ಮಾಡಲು ಟಿ.ವಿಯಲ್ಲಿ ವೀಕ್ಷಿಸುತ್ತಿರುವ ಲಕ್ಷಾಂತರ ಜನರು ಹಾಗೂ ಸಭಾಂಗಣದಲ್ಲಿದ್ದ ಪ್ರಮುಖ ನಾಯಕರರ ಮುಂದೆ ನಿಂತೆ, ಆಗ ಟೆಲಿಪ್ರಾಂಪ್ಟರ್ ಕೈಕೊಟ್ಟಿತು. ಕೂಡಲೇ ನಾನು ಯೋಚನೆ ಮಾಡಿದೆ, ಮೊದಲು ಎಸ್ಕಲೇಟರ್, ಈಗ ಟೆಲಿಪ್ರಾಂಪ್ಟರ್; ಯಾವ ರೀತಿಯ ಸ್ಥಳ ಇದು?’ ಎಂದು ಬರೆದುಕೊಂಡಿದ್ದಾರೆ.
57 ನಿಮಿಷದ ಭಾಷಣವನ್ನು ಟೆಲಿಪ್ರಾಂಪ್ಟರ್ ಇಲ್ಲದೆ ಟ್ರಂಪ್ ಪ್ರಾರಂಭಿಸಿದರು. 15 ನಿಮಿಷದ ಬಳಿಕ ಟೆಲಿಪ್ರಾಂಪ್ಟರ್ ದುರಸ್ತಿಯಾಯಿತು.
‘ಭಾಷಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಕೆಲವೇ ಮಂದಿ ಮಾಡಬಹುದಾದ ಕೆಲಸವನ್ನು ನಾನು ಮಾಡಿದೆ ಎಂದು ಅವರು ಮೆಚ್ಚಿದ್ದಿರಬೇಕು’ ಎಂದು ಟ್ರಂಪಗ್ ಹೇಳಿದ್ದಾರೆ.
ಭಾಷಣ ಮುಗಿದ ಬಳಿಕ ಸಭಾಂಗಣ ಧ್ವನಿವರ್ಧಕ ಸ್ಥಗಿತಗೊಂಡಿತ್ತು. ಭಾಷಾಂತರದ ಇಯರ್‌ಪೀಸ್ ಧರಿಸದ ಹೊರತು ಅಲ್ಲಿದ್ದ ನಾಯಕರಿಗೆ ನನ್ನ ಭಾಷಣ ಕೇಳಿಸಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಭಾಷಣ ಮುಗಿಸಿದ ಕೂಡಲೇ ನನ್ನ ಮುಂದೆ ಕುಳಿತಿದ್ದ ಮೆಲಾನಿಯ ಬಳಿ ‘ಹೇಗಿತ್ತು’ ಎಂದು ಕೇಳಿದೆ. ‘ಒಂದು ಶಬ್ದವೂ ನನಗೆ ಕೇಳಿಸಿಲ್ಲ’ ಎಂದು ಅವರು ಹೇಳಿದರು’ ಎಂದು ಟ್ರಂಪ್ ಹೇಳಿದ್ದಾರೆ.
ಈ ಘಟನೆಗಳು ಕಾಕತಾಳೀಯ ಅಲ್ಲ, ಇದು ಉದ್ದೇಶಪೂರ್ವಕ ಕೃತ್ಯ. ವಿಶ್ವಸಂಸ್ಥೆಗೆ ನಾಚಿಕೆಯಾಗಬೇಕು ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.