ADVERTISEMENT

ಅಮೆರಿಕ ಪೊಲೀಸ್ ಕ್ರೌರ್ಯ ಖಂಡಿಸಿ ಹಾಂಗ್‌ ಕಾಂಗ್‌ನಲ್ಲೂ ಪ್ರತಿಭಟನೆ

ರಾಯಿಟರ್ಸ್
Published 7 ಜೂನ್ 2020, 9:56 IST
Last Updated 7 ಜೂನ್ 2020, 9:56 IST
ಹಾಂಗ್‌ ಕಾಂಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನ
ಹಾಂಗ್‌ ಕಾಂಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನ   

ಹಾಂಗ್‌ ಕಾಂಗ್‌: ಅಮೆರಿಕದಲ್ಲಿ ಪೊಲೀಸ್‌ ಕ್ರೌರ್ಯದಿಂದ ಜಾರ್ಜ್‌ ಫ್ಲಾಯ್ಡ್‌ ಮೃತಪಟ್ಟ ಪ್ರಕರಣದ ವಿರುದ್ಧ ಹಾಂಗ್‌ ಕಾಂಗ್‌ನಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.ಇಲ್ಲಿನ ಯು.ಎಸ್‌ ಕಾನ್ಸುಲೇಟ್ ಕಚೇರಿ ಬಳಿ ಸೇರಿದ ಜನರು ಪೊಲೀಸರ ವರ್ತನೆ ವಿರುದ್ಧ ಪ್ರತಿಭಟಿಸಿದರು.

ಅಂತರರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯಾದ ಹಾಂಗ್ ಕಾಂಗ್‌ ಲೀಗ್‌ ಆಫ್‌ ಸೋಷಿಯಲ್‌ ಡೆಮಾಕ್ರಾಟ್ಸ್‌ ಸದಸ್ಯರೂ ಆಗಿದ್ದ ಪ್ರತಿಭಟನಾಕಾರರು ಮೃತ ಜಾರ್ಜ್‌ ಫ್ಲಾಯ್ಡ್ ಭಾವಚಿತ್ರ ಹಾಗೂ ಬ್ಲಾಕ್‌ ಲೈವ್ಸ್ ಮ್ಯಾಟರ್‌ ಘೋಷಣೆ ಇದ್ದ ಫಲಕಗಳನ್ನು ಹಿಡಿದಿದ್ದರು.

ಕೊರೊನಾ ಸೋಂಕು ಹರಡುವ ಭೀತಿಯ ನಡುವೆಯೂ ಈ ಪ್ರಕರಣದ ವಿರುದ್ಧ ಜಗತ್ತಿನ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ. ಹಾಂಗ್ ಕಾಂಗ್‌ನಲ್ಲಿನ ಪ್ರತಿಭಟನೆಯಲ್ಲಿ 12ಕ್ಕೂ ಹೆಚ್ಚು ಜನರಿದ್ದರು.

ADVERTISEMENT

‘ನಾವು ಭೌತಿಕವಾಗಿ ಅಮೆರಿಕದಲ್ಲಿರುವ ಪ್ರತಿಭಟನಾಕಾರರಿಂದ ದೂರವಿರಬಹುದು. ಆದರೆ, ಪ್ರತಿಭಟನೆಯಲ್ಲಿ ಅವರ ಜೊತೆಗೆ ನಾವೂ ಇದ್ದೇವೆ ಎಂದು ಸಾಂಕೇತಿಕವಾಗಿ ತೋರಿಸುವುದು ಪ್ರತಿಭಟನೆ ಉದ್ದೇಶವಾಗಿತ್ತು’ ಎಂದು 28 ವರ್ಷದ ಕ್ವಿನ್‌ಲ್ಯಾಂಡ್‌ ಅಂಡೆರ್ಸನ್ ಪ್ರತಿಕ್ರಿಯಿಸಿದರು.

ಪೊಲೀಸ್‌ ಕ್ರೌರ್ಯವನ್ನು ಖಂಡಿಸಿ ಅಮೆರಿಕದ ವಿವಿಧೆಡೆ ಪ್ರತಿಭಟನೆ ವ್ಯಕ್ತವಾದ ಹಿಂದೆಯೇ ಹಾಂಗ್‌ ಕಾಂಗ್‌ನಲ್ಲಿಯೂ ಅದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ 8 ಜನರಿಗಿಂತಲೂ ಅಧಿಕ ಮಂದಿ ಸೇರುವಂತಿಲ್ಲ ಎಂಬ ನಿಯಮವನ್ನು ಹಾಂಗ್‌ಕಾಂಗ್‌ನಲ್ಲಿ ಜಾರಿಗೆ ತರಲಾಗಿದೆ.

ಪೊಲೀಸ್‌ ಕ್ರೌರ್ಯ ಖಂಡಿಸುವ ಹೇಳಿಕೆಯನ್ನು ಓದುವ ಮೂಲಕ ಪ್ರತಿಭಟನೆಯನ್ನು ದಾಖಲಿಸಿದ ಪ್ರತಿಭಟನಾಕಾರರು ಬಳಿಕ ಸ್ಥಳದಿಂದ ಶಾಂತಿಯುತವಾಗಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.