ADVERTISEMENT

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆರಂಭ: ಭದ್ರತೆಗೆ 2 ಲಕ್ಷ ಸಿಬ್ಬಂದಿ ನಿಯೋಜನೆ

ಪಿಟಿಐ
Published 28 ಸೆಪ್ಟೆಂಬರ್ 2025, 14:14 IST
Last Updated 28 ಸೆಪ್ಟೆಂಬರ್ 2025, 14:14 IST
<div class="paragraphs"><p>ದುರ್ಗಾ ಪೂಜೆ (ಸಾಂದರ್ಭಿಕ ಚಿತ್ರ)</p></div>

ದುರ್ಗಾ ಪೂಜೆ (ಸಾಂದರ್ಭಿಕ ಚಿತ್ರ)

   

ಕೃಪೆ: ಪಿಟಿಐ

ಢಾಕಾ: ಬಾಂಗ್ಲಾದೇಶದಲ್ಲಿರುವ ಹಿಂದೂ ಸಮುದಾಯದವರು ಭಾನುವಾರ ದುರ್ಗಾ ಪೂಜೆ ಆರಂಭಿಸಿದ್ದು, ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶದಾದ್ಯಂತ ಸುಮಾರು 2 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉತ್ಸವದ ಮೊದಲ ದಿನವಾದ ಮಹಾ ಷಷ್ಠಿ ದಿನದಂದು ದುರ್ಗಾ ದೇವಿಯ ಮುಖವನ್ನು ಅನಾವರಣಗೊಳಿಸುವ ಹಾಗೂ ಸ್ವಾಗತಿಸುವ ಸಂದರ್ಭದಲ್ಲಿ ಢಾಕಾದಲ್ಲಿರುವ ಢಾಕೇಶ್ವರಿ ರಾಷ್ಟ್ರೀಯ ದೇವಾಲಯ ಡೋಲು, ಘೋಷಣೆಗಳು, ಶಂಖನಾದ ಮತ್ತು ಘಂಟೆಗಳ ಶಬ್ದದಿಂದ ತುಂಬಿಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

'ಈ ವರ್ಷದ ಉತ್ಸವವನ್ನು ಸಂಭ್ರಮದಿಂದ ಆಚರಿಸುವ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರ ನೀಡುತ್ತಿರುವ ಸಹಕಾರ ಮತ್ತು ಭದ್ರತೆಗಾಗಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಸಂತಸವಿದೆ' ಎಂದು ಬಾಂಗ್ಲಾದೇಶ ಪೂಜಾ ಆಚರಣೆ ಮಂಡಳಿಯ ಅಧ್ಯಕ್ಷ ಬಸುದೇವ್‌ ಧಾರ್‌ ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದೇಶದಾದ್ಯಂತ ಪೂಜಾ ಮಂಟಪಗಳ ಸಂಖ್ಯೆ ಹೆಚ್ಚಾಗಿದೆ. 11 ಕಡೆಗೆ ಸಣ್ಣಪುಟ್ಟ ತೊಂದರೆಗಳಾಗಿವೆ ಎಂದಿರುವ ಧಾರ್, ಅಧಿಕಾರಿಗಳು ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಈ ವರ್ಷ ಸುಮಾರು 33,350 ಮಂಟಪಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಭದ್ರತೆಗಾಗಿ ಸುಮಾರು 2 ಲಕ್ಷ ಪ್ಯಾರಾ ಪೊಲೀಸ್ ಅನ್ಸಾರ್‌ಗಳು ಹಾಗೂ ಪ್ಯಾರಾ ಮಿಲಿಟರಿ ಗಡಿ ಭದ್ರತಾ ಪಡೆಯ 15 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನೊಳಗೊಂಡ 430 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಇಲಾಖೆಯ ಸಲಹೆಗಾರ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಎಂ. ಜಹಾಂಗೀರ್‌ ಅಲಂ ಚೌಧರಿ ತಿಳಿಸಿರುವುದಾಗಿ ಬಾಂಗ್ಲಾದೇಶ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ 'ಬಿಎಸ್ಎಸ್‌' ವರದಿ ಮಾಡಿದೆ.

ಸುಳ್ಳು ಸುದ್ದಿಗಳನ್ನು ಹರಡದಂತೆಯೂ ಚೌಧರಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.