ಭೂಕಂಪನದಿಂದಾಗಿ ರಷ್ಯಾದ ಉತ್ತರದ ಕುರಿಲ್ ದ್ವೀಪದಲ್ಲಿ ಬುಧವಾರ ಸುನಾಮಿ ಅಲೆಗಳು ತೀರಕ್ಕೆ ಅಪ್ಪಳಿಸಿದವು
(ರಾಯಿಟರ್ಸ್ ಚಿತ್ರ)
ಟೋಕಿಯೊ: ರಷ್ಯಾದ ಪೂರ್ವ ಭಾಗದಲ್ಲಿ ಬುಧವಾರ ಪ್ರಬಲ ಭೂಕಂಪನವಾಗಿದ್ದು, ದೂರದ ಜಪಾನ್, ಹವಾಯಿ ದ್ವೀಪಗಳು ಹಾಗೂ ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ.
ಜಪಾನ್‌ನಲ್ಲಿ ಬೆಳಿಗ್ಗೆ 8.25ಕ್ಕೆ ರಿಕ್ಟರ್ ಮಾಪನದಲ್ಲಿ 8ರಷ್ಟು ತೀವ್ರತೆಯ ಭೂಕಂಪನವಾಯಿತು ಎಂದು ಜಪಾನ್ ಹಾಗೂ ಅಮೆರಿಕದ ಭೂಕಂಪನ ವಿಜ್ಞಾನಿಗಳು ಹೇಳಿದ್ದಾರೆ. ನಂತರ, ಕಂಪನದ ತೀವ್ರತೆ 8.8ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ಹೇಳಿದೆ. ಭೂಕಂಪನವು 20.7 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದೂ ಇಲಾಖೆ ಹೇಳಿದೆ.
ಭಾರಿ ಪ್ರಮಾಣದ ಹಾನಿಯಾಗಿರುವ ವರದಿಗಳು ಇಲ್ಲ ಎಂದಿರುವ ಅಧಿಕಾರಿಗಳು, ದಿನಪೂರ್ತಿ ಈ ಕಂಪನದ ಪರಿಣಾಮ ಕಂಡುಬಂದಿತ್ತು ಎಂದು ಹೇಳಿದ್ದಾರೆ. ಅಲ್ಲದೇ, ಸಮುದ್ರ ತೀರಗಳಿಗೆ ಹೋಗದಂತೆ ಜನರಿಗೆ ಎಚ್ಚರಿಸಿದ್ದಾರೆ.
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದ ಸಮೀಪದಲ್ಲಿ ಕಂಪನ ಕೇಂದ್ರವಿದ್ದು, 8.8ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಕೆಲವು ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಕಮ್ಚಟ್ಕಾ ದ್ವೀಪದಲ್ಲಿ 10–13 ಅಡಿಗಳಷ್ಟು ಎತ್ತರದ ಸುನಾಮಿ ಅಲೆಗಳು ಕಂಡುಬಂದರೆ, ಜಪಾನ್‌ನ ಉತ್ತರದಲ್ಲಿರುವ ಹೊಕೈಡೊ ದ್ವೀಪದಲ್ಲಿ ಅಪ್ಪಳಿಸಿದ ಸುನಾಮಿ ಅಲೆಗಳ ಎತ್ತರ 60 ಸೆಂ.ಮೀ.ನಷ್ಟಿತ್ತು. ಅಲಾಸ್ಕ ದ್ವೀಪದ ಅಲ್ಯೂಟಿಯನ್ ದ್ವೀಪಗಳಲ್ಲಿ 1.4 ಅಡಿಗಳಷ್ಟು ಎತ್ತರದ ಅಲೆಗಳು ಕಂಡುಬಂದವು.
ಜಪಾನ್‌ನ ಉತ್ತರ ಭಾಗದಲ್ಲಿ ಭೂಕಂಪನದ ಅನುಭವವಾದ ಕೂಡಲೇ ಗಾಬರಿಗೊಂಡ ಜನರು ಮನೆಗಳಿಂದ ಹೊರಗೆ ಓಡಿಬಂದರು. ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಆಶ್ರಯ ನೀಡುವುದಕ್ಕಾಗಿ ನಿರ್ಮಿಸಿರುವ ಪರಿಹಾರ ಕೇಂದ್ರಗಳಲ್ಲಿ ಅವರು ಆಶ್ರಯ ಪಡೆದಿದ್ದಾರೆ. ಹವಾಯಿ ದ್ವೀಪದ ರಾಜಧಾನಿ ಹೊನಲುಲುವಿನ ರಸ್ತೆಗಳು, ಹೆದ್ದಾರಿಗಳಲ್ಲಿ ಕಾರುಗಳು ಹಾಗೂ ಇತರ ವಾಹನಗಳು ಸಂಚಾರ ನಿಲ್ಲಿಸಿದ ಕಾರಣ, ದಟ್ಟಣೆ ಕಂಡುಬಂತು.
ಕೆನಡಾದ ಪಶ್ಷಿಮ ಕರಾವಳಿ, ಅಮೆರಿಕದ ವಾಷಿಂಗ್ಟನ್ ಹಾಗೂ ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಕೂಡ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.
ಪ್ರಮುಖ ಅಂಶಗಳು
* ಜಪಾನ್‌ನಲ್ಲಿ ದೋಣಿಗಳು ರೈಲುಗಳ ಸಂಚಾರ ನಿಲ್ಲಿಸಲಾಗಿತ್ತು. ಭೂಕಂಪನದ ಅನುಭವ ಕಂಡುಬಂದ ಪ್ರದೇಶಗಳಲ್ಲಿನ ವಿಮಾನನಿಲ್ದಾಣಗಳನ್ನು ಬಂದ್ ಮಾಡಲಾಗಿತ್ತು. ಕೆಲವೆಡೆ ವಿಮಾನಗಳು ವಿಳಂಬವಾಗಿ ಹಾರಾಟ ಆರಂಭಿಸಿದವು
* ಜಪಾನ್‌ನ ಅಣು ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳ ಹೇಳಿಕೆ
* ಸಮುದ್ರ ತೀರಗಳಿಂದ ದೂರ ಇರುವಂತೆ ಫಿಲಿಪ್ಪೀನ್ಸ್ ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ
* ದಕ್ಷಿಣ ಪೆಸಿಫಿಕ್ ದ್ವೀಪದಲ್ಲಿ ಪ್ರಬಲವಾದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ನ್ಯೂಜಿಲೆಂಡ್ ಅಧಿಕಾರಿಗಳು ಎಚ್ಚರಿಸಿದ್ದಾರೆ
* ಸುನಾಮಿ ಅಲೆಗಳ ತೀವ್ರತೆ ಕಡಿಮೆಯಾಗುವವರೆಗೆ ಕರಾವಳಿ ಕಡೆಗೆ ಪ್ರಯಾಣಿಸದಂತೆ ಫಿಜಿ ಸಮೋವಾ ಟೊಂಗಾ ಹಾಗೂ ಸೊಲೊಮನ್ ದ್ವೀಪಗಳ ಅಧಿಕಾರಿಗಳು ಸೂಚಿಸಿದ್ದಾರೆ
‘ಭಾರತಕ್ಕೆ ಅಪಾಯ ಇಲ್ಲ’
ಹೈದರಾಬಾದ್: ರಷ್ಯಾ ಪೂರ್ವ ಕರಾವಳಿಯಲ್ಲಿ ಸಂಭವಿಸಿರುವ ಭೂಕಂಪನದಿಂದಾಗಿ ಭಾರತದ ಕರಾವಳಿಯಲ್ಲಿ ಸುನಾಮಿಯ ಅಪಾಯ ಇಲ್ಲ ಎಂದು ಭಾರತೀಯ ಸುನಾಮಿ ಮುನ್ಸೂಚನೆ ಕೇಂದ್ರ (ಐಟಿಇಡಬ್ಲುಸಿ) ಬುಧವಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.