ಚೀನಾ– ಅಮೆರಿಕ ಧ್ವಜ
ರಾಯಿಟರ್ಸ್ ಚಿತ್ರ
ಬ್ರಸೆಲ್ಸ್, ಬೆಲ್ಜಿಯಂ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ಪಾಲುದಾರ ದೇಶಗಳು ಮತ್ತು ಇತರ ದೇಶಗಳ ಮೇಲೆ ವಿಧಿಸಿದ ಹೆಚ್ಚಿನ ಸುಂಕಗಳ ಜಾರಿಯನ್ನು ದಿಢೀರನೇ 90 ದಿನಗಳ ಅವಧಿಗೆ ಸ್ಥಗಿತಗೊಳಿಸಿದ ನಂತರ ಐರೋಪ್ಯ ಒಕ್ಕೂಟ (ಇಯು) ಕೂಡ ಗುರುವಾರ ಅಮೆರಿಕದ ಸರಕುಗಳ ಮೇಲೆ ಹೇರಿದ್ದ ಪ್ರತೀಕಾರದ ಸುಂಕದ ಯೋಜನೆಗಳನ್ನು ತಡೆಹಿಡಿಯಿತು.
ಅಮೆರಿಕದ ಸರಕುಗಳಿಗೆ ಚೀನಾ ವಿಧಿಸಿದ ಶೇ 84 ಸುಂಕ ಗುರುವಾರದಿಂದಲೇ ಜಾರಿಗೆ ಬಂದಿದ್ದು, ಚೀನಾದ ಸರಕುಗಳಿಗೆ ಹೆಚ್ಚಿಸಿರುವ ಶೇ 125 ಪ್ರತಿಸುಂಕ ಅಮೆರಿಕದಲ್ಲೂ ಇದೇ ವೇಳೆ ಜಾರಿಗೆ ಬಂದಿದೆ. ಇದು ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಸಮರ ಮುಂದುವರಿಯುವಂತೆ ಮಾಡಿದೆ.
‘ಅಮೆರಿಕದ ಸುಂಕ ನೀತಿಯು ವಿಶ್ವದ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಇಡೀ ಜಗತ್ತಿಗೆ ಮಾರಕವಾಗಿದೆ’ ಎಂದು ಚೀನಾ ಹೇಳಿದೆ. ಹಾಲಿವುಡ್ ಅನ್ನು ತನ್ನ ಪ್ರತೀಕಾರದ ಸುಂಕದ ಗುರಿ ಪಟ್ಟಿಗೆ ಸೇರಿಸಿರುವ ಚೀನಾ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಚಲನಚಿತ್ರಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದಾಗಿ ಘೋಷಿಸಿದೆ.
ಈ ಸುಂಕ ಸಮರದ ವಿಚಾರದಲ್ಲಿ ಮಾತುಕತೆಗೆ ಬಾಗಿಲು ತೆರೆದಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯವು ಹೇಳಿದೆ.
‘ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಪರಸ್ಪರರಿಗೆ ಲಾಭ ತರುವ ಸಹಕಾರದ ತತ್ವಗಳ ಆಧಾರದ ಮೇಲೆ ಅಮೆರಿಕವು ಚೀನಾ ಜತೆ ಮಾತುಕತೆ ಮತ್ತು ಸಮಾಲೋಚನೆ ನಡೆಸಿ, ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲಿದೆ ಎಂಬುದಾಗಿ ನಾವು ಭಾವಿಸಿದ್ದೇವೆ’ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರಾದ ಹಿ ಯೊಂಗಿಯಾನ್ ಹೇಳಿದ್ದಾರೆ.
ಅಮೆರಿಕದ ಸರಕುಗಳ ಮೇಲಿನ ಪ್ರತೀಕಾರದ ಸುಂಕ ಹಿಂಪಡೆಯಲು ನಿರಾಕರಿಸಿರುವ ಚೀನಾ ಸೇರಿ ಎಲ್ಲ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳು ಏರ್ಪಡಲಿವೆ ಎಂದು ಶ್ವೇತಭವನದಲ್ಲಿ ಭವಿಷ್ಯ ನುಡಿದಿರುವ ಟ್ರಂಪ್, ‘ಒಪ್ಪಂದ ಮಾಡಿಕೊಳ್ಳುವ ವಿಚಾರದಲ್ಲಿ ಯಾವ ಮಾರ್ಗದಲ್ಲಿ ಹೋಗಬೇಕೆಂಬುದು ಚೀನಾದ ನಾಯಕರಿಗೆ ತಿಳಿದಿಲ್ಲ. ಚೀನಾ ಅತಿಯಾದ ಉತ್ಪಾದನೆ ಮಾಡಿ, ತನ್ನ ಸರಕುಗಳನ್ನು ಇತರ ದೇಶಗಳಿಗೆ ತಂದು ಸುರಿಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವ್ಯಾಪಾರ ಸಂಧಾನದ ದಿನವಾಗಲಿದೆ. ಪಾಲುದಾರರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ನಾವು ಮುಂದಿನ 90 ದಿನಗಳವರೆಗೆ ಮುಕ್ತವಾಗಿ ಇರಲಿದ್ದೇವೆ. ಈಗಾಗಲೇ 75ಕ್ಕೂ ಹೆಚ್ಚು ದೇಶಗಳ ನಾಯಕರು ವಾಷಿಂಗ್ಟನ್ ಜತೆಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ’ ಎಂದು ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಅವರು ‘ಎಬಿಸಿ ನ್ಯೂಸ್’ಗೆ ತಿಳಿಸಿದ್ದಾರೆ.
ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡಿರುವುದಾಗಿ ವಿಯೆಟ್ನಾಂ ಹೇಳಿದರೆ, ಪಾಕಿಸ್ತಾನವು ವಾಷಿಂಗ್ಟನ್‌ಗೆ ನಿಯೋಗವೊಂದನ್ನು ಮಾತುಕತೆಗಾಗಿ ಕಳುಹಿಸುತ್ತಿದೆ. ಇತರ ದೇಶಗಳೂ ಸಹ ಚೌಕಾಸಿಗೆ ಸಿದ್ಧವಾಗಿವೆ.
‘ಹೊಂದಾಣಿಕೆಗೆ ಮುಕ್ತ’
ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಹೆಚ್ಚುವರಿ ಪ್ರತಿಸುಂಕವನ್ನು 90 ದಿನ ತಡೆಹಿಡಿಯಲು 27 ರಾಷ್ಟ್ರಗಳ ಸದಸ್ಯತ್ವವುಳ್ಳ ಐರೋಪ್ಯ ಒಕ್ಕೂಟದ
(ಇ.ಯು) ಕಾರ್ಯಕಾರಿ ಆಯೋಗವು ತೀರ್ಮಾನಿಸಿದೆ.
ವಿವಿಧ ದೇಶಗಳ ಆಮದು ಉತ್ಪನ್ನಗಳಿಗೆ ಅಧಿಕ ಸುಂಕ ವಿಧಿಸುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನ ಮುಂದೂಡಿದ ನೀಡಿದ ಹಿಂದೆಯೇ ಈ ತೀರ್ಮಾನ ಕೈಗೊಂಡಿದೆ.
‘ಸುಂಕ ಕುರಿತ ಹೊಂದಾಣಿಕೆ ಮಾತುಕತೆಯನ್ನು ಮುಕ್ತವಾಗಿರಿಸುವ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಇ.ಯು ಮುಖ್ಯಸ್ಥೆ ಉರ್ಸುಲಾ ವೊನ್ ಡೆರ್ ಲೆಯೆನ್ ತಿಳಿಸಿದ್ದಾರೆ. ‘ಅಮೆರಿಕ ಜೊತೆಗಿನ ರಾಜಿ ಮಾತುಕತೆ ಫಲಪ್ರದವಾಗಿ ಇರದಿದ್ದಲ್ಲಿ, ಇ.ಯುವಿನ ಉದ್ದೇಶಿತ ಪ್ರತಿಕ್ರಿಯಾತ್ಮಕ ಕ್ರಮಗಳು ಜಾರಿಗೆ ಬರಲಿವೆ’ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆಗೆ ತೆರೆದ ಬಾಗಿಲು
ನವದೆಹಲಿ: ಟ್ರಂಪ್ ಆಡಳಿತವು ಪ್ರತಿ ಸುಂಕ ಜಾರಿಗೆ ನೀಡಿರುವ ವಿರಾಮವು, ಅಮೆರಿಕದ ಜೊತೆಗೆ ಭಾರತವು ದ್ವಿಪಕ್ಷೀಯ ವ್ಯಾಪಾರ ಕುರಿತು ಮಾತುಕತೆ ನಡೆಸಲು ಅವಕಾಶದ ಬಾಗಿಲನ್ನು ತೆರೆದಿಟ್ಟಿದೆ ಎಂದು ತಜ್ಞರು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರವು ಅಮೆರಿಕದೊಟ್ಟಿಗೆ ದ್ವಿಪಕ್ಷೀಯ ವ್ಯಾಪಾರಕ್ಕೆ ಹೆಜ್ಜೆ ಇಟ್ಟಿದೆ. ರಾಜತಾಂತ್ರಿಕ ಮಾತುಕತೆ ಹಾಗೂ ತ್ವರಿತಗತಿಯಲ್ಲಿ ನಡೆಯುವ ಸಂಧಾನ ಪ್ರಕ್ರಿಯೆಗಳು ಭಾರತಕ್ಕೆ ವರದಾನವಾಗಲಿವೆ ಎಂದು ಹೇಳಿದ್ದಾರೆ.
‘ಟ್ರಂಪ್ ಆಡಳಿತದ ನಿರ್ಧಾರವು ಉತ್ತಮವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಸಚಿವಾಲಯವು ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಿದೆ’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಾಲ್ಹಾನ್ ಹೇಳಿದ್ದಾರೆ.
ಶ್ವೇತಭವನ ನೀಡಿರುವ ಅವಕಾಶವು ರಫ್ತುದಾರರಿಗೆ ದೊಡ್ಡ ಪರಿಹಾರ ನೀಡಿದೆ. ಇದನ್ನು ಬಳಸಿಕೊಂಡರೆ ಪ್ರತಿ ಸುಂಕದಿಂದ ಭಾರತದ ಮೇಲಾಗುವ ಪರಿಣಾಮಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
‘ಚೀನಾದ ಮೇಲೆ ಅಮೆರಿಕ ವಿಧಿಸಿರುವ ಅತಿಹೆಚ್ಚು ಸುಂಕದ ಪ್ರಯೋಜನ ಪಡೆಯಲು ದೇಶದ ಕೈಗಾರಿಕಾ ವಲಯವು ಮುಂದಾಗಬೇಕಿದೆ. ಇದು ದೇಶೀಯ ತಯಾರಿಕಾ ವಲಯದ ಬಲವರ್ಧನೆಗೆ ನೆರವಾಗಲಿದೆ’ ಎಂದು ಮುಂಬೈನ ರಫ್ತುದಾರ ಎಸ್.ಕೆ. ಸರಾಫ್ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಟ್ರಂಪ್ ಸುಂಕ ಹಿಂತೆಗೆದು ಕೊಳ್ಳುವಿಕೆ ನಿರ್ಧಾರ ಸ್ವಾಗತಾರ್ಹ. ಇದೇ 28ರಂದು ಒಟ್ಟಾವಾ ಹೊಸ ಆರ್ಥಿಕ ಒಪ್ಪಂದದ ಬಗ್ಗೆ ವಾಷಿಂಗ್ಟನ್ ಜತೆಗೆ ಮಾತುಕತೆ ಪ್ರಾರಂಭಿಸಲಿದೆ.–ಮಾರ್ಕ್ ಕಾರ್ನೆ, ಕೆನಡಾ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.