ADVERTISEMENT

ಯುರೋಪ್‌ನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಅಂತ್ಯದತ್ತ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 24 ಜನವರಿ 2022, 6:58 IST
Last Updated 24 ಜನವರಿ 2022, 6:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಪನ್‌ಹೇಗನ್: ಓಮೈಕ್ರಾನ್ ರೂಪಾಂತರ ತಳಿಯು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹೊಸ ಹಂತಕ್ಕೆ ಸರಿಸಿದ್ದು, ಯುರೋಪಿನಲ್ಲಿ ಅಂತ್ಯದತ್ತ ಸಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗವು ಅಂತ್ಯದತ್ತ ಸಾಗುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಮಾರ್ಚ್ ವೇಳೆಗೆ ಶೇ 60 ಯುರೋಪ್ ಜನರಿಗೆ ಓಮೈಕ್ರಾನ್ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಯುರೋಪಿನಾದ್ಯಂತ ಓಮೈಕ್ರಾನ್ ಉಲ್ಬಣವು ಕಡಿಮೆಯಾದ ಬಳಿಕ, ಲಸಿಕೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಕೆಲವು ತಿಂಗಳುಗಳವರೆಗೆ ಶಾಂತವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಸಾಂಕ್ರಾಮಿಕ ರೋಗ ಮತ್ತೆ ಹಿಂತಿರುಗಬೇಕೆಂದಿಲ್ಲ ಎಂದು ಹೇಳಿದರು.

ಅಮೆರಿಕದ ವಿಜ್ಞಾನಿ ಆಂಥೋನಿ ಫೌಸಿ ಭಾನುವಾರ ಇದಕ್ಕೆ ಸಮಾನವಾದ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಈ ವಾರ ಕೋವಿಡ್-19 ಪ್ರಕರಣಗಳು ಅಮೆರಿಕದ ಕೆಲವು ಭಾಗಗಳಲ್ಲಿ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಹಾಗಿದ್ದರೂ ಅತೀವ ಜಾಗರೂಕರಾಗಿರುವಂತೆಯೇ ಹ್ಯಾನ್ಸ್ ಕ್ಲೂಗ್ ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗ ಯಾವಾಗ ಕೊನೆಗೊಳ್ಳಲಿದೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಊಹಿಸಲು ಮಾತ್ರ ಸಾಧ್ಯ. ಈ ವೈರಸ್ ಒಂದಕ್ಕಿಂತ ಹೆಚ್ಚು ಬಾರಿಅಲೆ ಎಬ್ಬಿಸಿರುವಹಿನ್ನೆಲೆಯಲ್ಲಿ ನಾವು ತುಂಬಾ ಜಾಗರೂಕರಾಗಿರಬೇಕು. ಓಮೈಕ್ರಾನ್ ವ್ಯಾಪಕವಾಗಿ ಹರಡುವುದರೊಂದಿಗೆ ಇತರ ರೂಪಾಂತರಗಳು ಹೊರಹೊಮ್ಮಬಹುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.