ADVERTISEMENT

ರಷ್ಯಾ ದಾಳಿ: ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ

ಏಜೆನ್ಸೀಸ್
Published 4 ಮಾರ್ಚ್ 2022, 2:20 IST
Last Updated 4 ಮಾರ್ಚ್ 2022, 2:20 IST
ರಷ್ಯಾ ಪಡೆಯ ಶೆಲ್‌ದಾಳಿಯಿಂದ ಕೀವ್‌ನ ಕಟ್ಟಡವೊಂದು ಅಗ್ನಿಗೆ ಆಹುತಿಯಾಗಿರುವುದು.
ರಷ್ಯಾ ಪಡೆಯ ಶೆಲ್‌ದಾಳಿಯಿಂದ ಕೀವ್‌ನ ಕಟ್ಟಡವೊಂದು ಅಗ್ನಿಗೆ ಆಹುತಿಯಾಗಿರುವುದು.   

ಕೀವ್‌: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಶುಕ್ರವಾರ ಬೆಳಗಿನ ಜಾವ ರಷ್ಯಾ ಪಡೆ ನಡೆಸಿದ ಶೆಲ್‌ದಾಳಿಯಿಂದ ಝಪೊರಿಝ್ಯಾದ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರ ಎನ್ನಲಾಗಿದೆ.

ಸಮೀಪದ ಎನೆರ್‌ಗೊಡರ್‌ ನಗರದ ಮೇಯರ್‌ ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರವು ರಷ್ಯಾ ದಾಳಿಗೆ ತುತ್ತಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ 'ಎಎಫ್‌ಪಿ' ವರದಿ ಮಾಡಿದೆ.

ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಪರಮಾಣು ಸ್ಥಾವರದ ಸಮೀಪ ಉಕ್ರೇನ್‌ ಮತ್ತು ರಷ್ಯಾ ಪಡೆಯ ನಡುವೆ ಯುದ್ಧ ನಡೆಯುತ್ತಿದೆ ಎಂದು ಮೇಯರ್‌ ಡಿಮಿಟ್ರೊ ಒರ್‌ಲೊವ್‌ ಅವರು ಇದಕ್ಕೂ ಮೊದಲು ತಿಳಿಸಿದ್ದರು.

ADVERTISEMENT

'ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರದ ಘಟಕಗಳ ಮೇಲೆ ಮತ್ತು ಕಟ್ಟಡಗಳ ಮೇಲೆ ನಿರಂತರವಾಗಿ ಶತ್ರುಗಳು ಶೆಲ್‌ದಾಳಿ ನಡೆಸಿದ್ದರ ಪರಿಣಾಮ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದ ವಿಶ್ವದ ಭದ್ರತೆಗೆ ಅಪಾಯವಿದೆ' ಎಂದು ಓರ್‌ಲೊವ್‌ ಅವರು ಟೆಲಿಗ್ರಾಮ್‌ ಚಾನೆಲ್‌ ಒಂದಕ್ಕೆ ತಿಳಿಸಿದ್ದಾರೆ. ಅವರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ರಷ್ಯಾ ಪಡೆ ಪರಮಾಣು ಸ್ಥಾವರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಯುದ್ಧ ಟ್ಯಾಂಕ್‌ಗಳನ್ನು ನಗರಕ್ಕೆ ಸಾಗಿಸುತ್ತಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ಇದಕ್ಕೂ ಮೊದಲು ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.