ADVERTISEMENT

ದೇಶದ ವಿರುದ್ಧ ದ್ವೇಷ ಹರಡುವ ಭ್ರಷ್ಟರ ನಾಶಕ್ಕೆ ದುಡಿಯುವೆ: ರಷ್ಯಾ ಮಾಜಿ ಅಧ್ಯಕ್ಷ

ಏಜೆನ್ಸೀಸ್
Published 7 ಜೂನ್ 2022, 12:52 IST
Last Updated 7 ಜೂನ್ 2022, 12:52 IST
ರಷ್ಯಾ–ಉಕ್ರೇನ್‌ ಸಂಘರ್ಷದ ದೃಶ್ಯ
ರಷ್ಯಾ–ಉಕ್ರೇನ್‌ ಸಂಘರ್ಷದ ದೃಶ್ಯ   

ಮಾಸ್ಕೊ: ದೇಶದ ವಿರುದ್ಧ ದ್ವೇಷ ಹರಡುತ್ತಿರುವವರು ಭ್ರಷ್ಟರು. ಅವರು ನಾಶವಾಗುವಂತೆ ಕೆಲಸ ಮಾಡುವುದಾಗಿ ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಶಪಥ ಮಾಡಿದ್ದಾರೆ.

ರಷ್ಯಾದ ಈಗಿನ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆಪ್ತರಾಗಿರುವ ಮೆಡ್ವೆಡೆವ್‌,'ನನ್ನ ಟೆಲಿಗ್ರಾಂ ಪೋಸ್ಟ್‌ಗಳು ಏಕೆ ಕಟುವಾಗಿರುತ್ತವೆ ಎಂದು ನನ್ನನ್ನು ಆಗಾಗ್ಗೆ ಕೇಳಲಾಗುತ್ತದೆ. ಅದಕ್ಕೆ ಉತ್ತರ ನಾನು ಅವರನ್ನು (ರಷ್ಯಾವನ್ನು ದ್ವೇಷಿಸುವವರನ್ನು) ದ್ವೇಷಿಸುವುದು. ಅವರು ಕಿಡಿಗೇಡಿಗಳು ಮತ್ತು ಭ್ರಷ್ಟರು' ಎಂದುಟೆಲಿಗ್ರಾಂನಲ್ಲಿ ಗುಡುಗಿದ್ದಾರೆ.

ಮುಂದುವರಿದು, 'ಅವರು ನಮ್ಮ ಸಾವನ್ನು, ರಷ್ಯಾದ ವಿನಾಶವನ್ನು ಬಯಸುತ್ತಾರೆ. ಆದಾಗ್ಯೂ ನಾನು ಬದುಕಿದ್ದೇನೆ. ಅವರ ನಾಶಕ್ಕಾಗಿ ನಾನು ಎಲ್ಲವನ್ನೂ ಮಾಡಲಿದ್ದೇನೆ' ಎಂದು ಹೆಚ್ಚಿನ ವಿವರಗಳನ್ನು ನೀಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

2008ರಿಂದ 20121ರ ವರೆಗೆ ಅಧ್ಯಕ್ಷರಾಗಿದ್ದ ಮೆಡ್ವೆಡೆವ್‌, ಸದ್ಯಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ.

ರಷ್ಯಾ ಸೇನೆ ಉಕ್ರೇನ್‌ನಲ್ಲಿ ಫೆಬ್ರುವರಿ 24ರಂದು ಆಕ್ರಮಣ ಆರಂಭಿಸಿತ್ತು. ಇದನ್ನು ಖಂಡಿಸಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿವೆ. ಈ ಕ್ರಮವನ್ನು ಟೀಕಿಸಿ ಮೆಡ್ವೆಡೆವ್‌ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕಟು ಶಬ್ದಗಳನ್ನು ಬಳಸಿ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದಾರೆ.

'‍ಹುಚ್ಚತನ'ದ ನಿರ್ಬಂಧಗಳನ್ನು ಹೇರಿ ಮಾಸ್ಕೊಗೆ ಕಪಾಳ ಮೋಕ್ಷ ಮಾಡಿದರೆ, ರಷ್ಯಾ ಆಹಾರ ಸರಬರಾಜು ಮುಂದುವರಿಸಲಿದೆ ಎಂಬ ನಿರೀಕ್ಷೆಯನ್ನುಪಾಶ್ಚಾತ್ಯ ರಾಷ್ಟ್ರಗಳು ಇಟ್ಟುಕೊಳ್ಳಬಾರದು ಎಂದು ಕಳೆದ ತಿಂಗಳು ಎಚ್ಚರಿಸಿದ್ದರು.

ಹಾಗೆಯೇ, 'ನಮ್ಮ ವಿಶೇಷ ಸೇನಾ ಕಾರ್ಯಾಚರಣೆಗೆ ವಿರುದ್ಧವಾಗಿ ನ್ಯಾಟೊ, ಉಕ್ರೇನ್‌ ಬೆಂಬಲಕ್ಕೆ ನಿಂತರೆ ಅಣ್ವಸ್ತ್ರ ಯುದ್ಧ ಎದುರಾಗಲಿದೆ' ಎಂದೂಬೆದರಿಕೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.