ADVERTISEMENT

ದೇಶದ ಕೃಷಿವಲಯ ಸುಧಾರಣೆಗೆ ರೈತರ ಕಾಯ್ದೆ ಪೂರಕ: ಐಎಂಎಫ್ ಶ್ಲಾಘನೆ

ಪಿಟಿಐ
Published 15 ಜನವರಿ 2021, 7:10 IST
Last Updated 15 ಜನವರಿ 2021, 7:10 IST
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ    

ವಾಷಿಂಗ್ಟನ್: ರೈತರ ಸುಧಾರಣಾ ಕಾಯ್ದೆಯಿಂದ ಭಾರತದ ಕೃಷಿವಲಯ ಚೇತರಿಸಿಕೊಳ್ಳಲಿದ್ದು, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ದೊರೆಯಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಐಎಂಎಫ್‌ನ ಗ್ಯಾರಿ ರೈಸ್ ಪ್ರಕಾರ, ಹೊಸ ವ್ಯವಸ್ಥೆಗೆ ಬದಲಾಗುವಾಗ ಕೆಲವರಿಗೆ ಆರಂಭದಲ್ಲಿ ಸಮಸ್ಯೆಯಾಗಬಹುದು. ಅವರಿಗೆ ಸೂಕ್ತ ಸಾಮಾಜಿಕ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ಉಳಿದಂತೆ, ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವಿದೆ, ಭಾರತ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಗ್ಯಾರಿ ರೈಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನೂತನ ರೈತರ ಸುಧಾರಣಾ ಕಾಯ್ದೆಯಿಂದ ಕೃಷಿವಲಯ ಸುಧಾರಣೆಯ ಜತೆಗೇ, ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದೆ. ರೈತರಿಗೆ ಬೆಳೆಗೆ ಸೂಕ್ತ ಬೆಲೆ, ಅಧಿಕ ಪ್ರಯೋಜನ ಮತ್ತು ನೇರಮಾರುಕಟ್ಟೆ ಸಹಿತ ವಿವಿಧ ಆಯ್ಕೆಗಳು ದೊರೆಯಲಿವೆ. ಗ್ರಾಮೀಣ ರೈತರ ಜೀವನಮಟ್ಟ ಸುಧಾರಣೆಗೂ ಪೂರಕವಾಗಿದೆ. ಆದರೆ ಹೊಸ ವ್ಯವಸ್ಥೆಯಿಂದ ಆರಂಭಿಕ ಸಮಸ್ಯೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಐಎಂಎಫ್‌ನ ಗ್ಯಾರಿ ತಿಳಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಗ್ಯಾರಿ, ಹೊಸ ಕಾಯ್ದೆ ಒಂದು ಮಹತ್ವದ ಸುಧಾರಣೆಯಾಗಿದೆ. ಇಲ್ಲಿ ರೈತರ ಹಿತಕಾಯುವ ಉದ್ದೇಶದಿಂದ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಹೀಗಾಗಿ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಲಾಭ ಮತ್ತು ಪಾಲು ನೇರವಾಗಿ ದೊರೆಯಲಿದೆ ಎಂದು ಹೇಳಿದ್ದಾರೆ.

ADVERTISEMENT

ದೆಹಲಿ ಗಡಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ಸಾವಿರಕ್ಕೂ ಅಧಿಕ ರೈತರು ಕಾಯ್ದೆಯನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.