ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪಿಟಿಐ ಚಿತ್ರ
ವಾಷಿಂಗ್ಟನ್/ನ್ಯೂಯಾರ್ಕ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಬೆನ್ನಲ್ಲೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಹಾಗೂ ಪೆರು ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಸಾಧ್ಯವಾದಷ್ಟು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರು ದಿನಗಳ ಭೇಟಿ ಸಲುವಾಗಿ ಭಾನುವಾರವಷ್ಟೇ ಅಮೆರಿಕಕ್ಕೆ ಬಂದಿದ್ದ ನಿರ್ಮಲಾ, ಬಳಿಕ ಪೆರುವಿಗೆ ಐದು ದಿನಗಳ ಪ್ರವಾಸ ಕೈಗೊಳ್ಳಬೇಕಿತ್ತು.
ಸಚಿವೆ ಪ್ರವಾಸ ಮೊಟಕುಗೊಳಿಸಿರುವ ಕುರಿತು ಹಣಕಾಸು ಸಚಿವಾಲಯ ಎಕ್ಸ್/ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. 'ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ, ಪೆರು ಅಧಿಕೃತ ಭೇಟಿಯನ್ನು ಮೊಟಕುಗೊಳಿಸಿದ್ದಾರೆ. ಈ ಕಠಿಣ ಹಾಗೂ ದುರಂತದ ಸಂದರ್ಭದಲ್ಲಿ ನಮ್ಮವರೊಂದಿಗೆ ಇರಲು, ಸಾಧ್ಯವಾದಷ್ಟು ಬೇಗನೆ, ಲಭ್ಯವಿರುವ ವಿಮಾನದಲ್ಲಿ ಹಿಂದಿರುಗಲಿದ್ದಾರೆ' ಎಂದು ತಿಳಿಸಿದೆ.
ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿನ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 28 ಮಂದಿ ಪ್ರಾಣ ಕಳೆದುಕೊಂಡಿದ್ದು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ.
ಸೌದಿಯಿಂದ ಮೋದಿ ವಾಪಸ್
ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಎರಡು ದಿನಗಳ ಪ್ರವಾಸವನ್ನು ಮೊಟಕುಗೊಳಿಸಿ ಮಂಗಳವಾರ ರಾತ್ರಿಯೇ ದೆಹಲಿಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.