ADVERTISEMENT

ವಿದೇಶ ವಿದ್ಯಮಾನ| ಫ್ರಾನ್ಸ್‌: ಪಿಂಚಣಿ ವ್ಯವಸ್ಥೆ ಬದಲಾವಣೆಗೆ ಜನಾಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:30 IST
Last Updated 26 ಮಾರ್ಚ್ 2023, 19:30 IST
ಪಿಂಚಣಿ ಸುಧಾರಣೆಯನ್ನು ವಿರೋಧಿಸಿ ಇದೇ 23ರಂದು ನಡೆದ ಪ್ರತಿಭಟನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು -ಎಎಫ್‌ಪಿ ಚಿತ್ರ
ಪಿಂಚಣಿ ಸುಧಾರಣೆಯನ್ನು ವಿರೋಧಿಸಿ ಇದೇ 23ರಂದು ನಡೆದ ಪ್ರತಿಭಟನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು -ಎಎಫ್‌ಪಿ ಚಿತ್ರ   

ಫ್ರಾನ್ಸ್‌ನ ನೂತನ ಪಿಂಚಣಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್‌ ಅವರ ಈ ಯೋಜನೆ
ಯನ್ನು ವಿರೋಧಿಸಿ ದೇಶದ 1.9 ಕೋಟಿಗೂ ಹೆಚ್ಚು ಕಾರ್ಮಿಕರು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದ್ದರೆ, ಕೆಲವೆಡೆ ಹಿಂಸಾರೂಪ ಪಡೆದಿದೆ. ವಿಶ್ವದಲ್ಲಿ ಹೆಚ್ಚು ಬಲಿಷ್ಠವಾದ ಮತ್ತು ಜನಪರವಾದ ಸಾಮಾಜಿಕ ಭದ್ರತಾ ವ್ಯವಸ್ಥೆ ಇರುವ ದೇಶಗಳಲ್ಲಿ ಫ್ರಾನ್ಸ್‌ ಸಹ ಒಂದು. ಸರ್ಕಾರವು ಈಗ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯು ಕಾರ್ಮಿಕ ವಿರೋಧಿಯಾಗಿದೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವುತ್ತದೆ ಎಂಬುದು ಪ್ರತಿಭಟನಕಾರರ ದೊಡ್ಡ ಆಕ್ಷೇಪ.

ಫ್ರಾನ್ಸ್‌ನಲ್ಲಿ ಈಚಿನವರೆಗೂ ಜಾರಿಯಲ್ಲಿದ್ದ ಪಿಂಚಣಿ ವ್ಯವಸ್ಥೆಯು ಏಕರೂಪವಾಗಿರಲಿಲ್ಲ. ಪಿಂಚಣಿ ಯೋಜನೆಗಳಲ್ಲಿ 42 ವಿವಿಧ ಸ್ವರೂಪದ ಉಪಯೋಜನೆಗಳು ಇದ್ದವು. ಆ ಎಲ್ಲಾ ಉಪಯೋಜನೆಗಳ ನಿಯಮಗಳು ಭಿನ್ನ–ಭಿನ್ನವಾಗಿದ್ದವು. ಹಳೆಯ ಯೋಜನೆಯ ಪ್ರಕಾರ 62 ವರ್ಷವು ನಿವೃತ್ತಿಯ ವಯಸ್ಸು ಮತ್ತು ಪಿಂಚಣಿಗೆ ಅರ್ಹವಾದ ವಯಸ್ಸು. ಆದರೆ, ಇದು ಎಲ್ಲಾ ನೌಕರರಿಗೆ/ಕಾರ್ಮಿಕರಿಗೆ ಏಕರೀತಿಯಲ್ಲಿ ಅನ್ವಯವಾಗುತ್ತಿರಲಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ನಿವೃತ್ತಿ ಮತ್ತು ಪಿಂಚಣಿಗೆ ಅರ್ಹ ವಯಸ್ಸು 62 ಆಗಿತ್ತು. ಸರ್ಕಾರಿ ಹುದ್ದೆಯೇ ಆಗಿದ್ದರೂ ಗಣಿಗಳಲ್ಲಿ, ಸುರಂಗ ಮೆಟ್ರೊ ರೈಲುಗಳಲ್ಲಿ, ತೆರೆದ ಪರಿಸರದಲ್ಲಿ ಕೆಲಸ ಮಾಡುವ ನೌಕರರ ನಿವೃತ್ತಿಯ ಮತ್ತು ಪಿಂಚಣಿಗೆ ಅರ್ಹತೆ ಪಡೆಯುವ ವಯಸ್ಸು 62ಕ್ಕಿಂತ ಕಡಿಮೆ ಇತ್ತು. ಕೆಲವು ಸ್ವರೂಪದ ಉದ್ಯೋಗಗಳಲ್ಲಿ ನಿವೃತ್ತಿಯ ವಯಸ್ಸು 60ಕ್ಕಿಂತ ಕಡಿಮೆ ಇದ್ದು, ಪಿಂಚಣಿಗೆ ಅರ್ಹತೆ ಪಡೆಯುವ ವಯಸ್ಸೂ ಅದೇ ಆಗಿತ್ತು. ಖಾಸಗಿ ವಲಯದಲ್ಲೂ ಇದೇ ಸ್ವರೂಪದ ವರ್ಗೀಕರಣ ಇತ್ತು.

ಈ 42 ಸ್ವರೂಪದ ಉಪಯೋಜನೆಗಳನ್ನು ರದ್ದುಪಡಿಸಿ, ಸರ್ಕಾರವು ಈಗ ಒಂದೇ ಸಾರ್ವತ್ರಿಕ ಯೋಜನೆಯನ್ನು ಜಾರಿಗೆ ತಂದಿದೆ. ನಿವೃತ್ತಿಯ ವಯಸ್ಸನ್ನು 64ಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಎಲ್ಲಾ ಸ್ವರೂಪದ ಹುದ್ದೆ ಮತ್ತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರು 64 ವಯಸ್ಸಿನ ನಂತರ ಪಿಂಚಣಿಗೆ ಅರ್ಹತೆ ಪಡೆಯುತ್ತಾರೆ. ಫ್ರಾನ್ಸ್‌ ಸುರಂಗ ರೈಲು ಸಿಬ್ಬಂದಿಯ ನಿವೃತ್ತಿಯ ವಯಸ್ಸು ಕಡಿಮೆ ಇತ್ತು. ಸದಾ ಕಾಲ ಸುರಂಗದಲ್ಲಿ ಕೃತಕ ಬೆಳಕಿನಲ್ಲೇ ಕೆಲಸ ಮಾಡುವ ಕಾರಣ, ಈ ಸಿಬ್ಬಂದಿಗೆ ಅತ್ಯಂತ ಕಡಿಮೆ ಅವಧಿಯ ಸೇವಾವಧಿ ನಿಗದಿ ಮಾಡಲಾಗಿದೆ. ಕೃತಕ ಬೆಳಕಿನಲ್ಲೇ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ಅದಕ್ಕೆ ಪರಿಹಾರವಾಗಿ ಸೇವಾವಧಿಯನ್ನು ಕಡಿಮೆ ನಿಗದಿ ಮಾಡಲಾಗಿತ್ತು. ನೂತನ ಯೋಜನೆ ಅಡಿಯಲ್ಲಿ ಉತ್ತಮ ಮಟ್ಟದ ಪಿಂಚಣಿ ಪಡೆಯಬೇಕೆಂದರೆ ಈ ಸಿಬ್ಬಂದಿ 64 ವರ್ಷದವರೆಗೂ ಕೆಲಸ ಮಾಡಬೇಕಾಗುತ್ತದೆ. ಜತೆಗೆ ಹೆಚ್ಚುವರಿ ಅವಧಿಯವರೆಗೆ ದೇಣಿಗೆ ನೀಡಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳ ಹುದ್ದೆ/ನೌಕರಿಯೂ ಇದೇ ಸ್ವರೂಪದ ಪರಿಣಾಮಕ್ಕೆ ಗುರಿಯಾಗಬೇಕಿದೆ. ಹೀಗಾಗಿಯೇ ಫ್ರಾನ್ಸ್‌ನ ಕಾರ್ಮಿಕ ವರ್ಗವು ದೊಡ್ಡಸಂಖ್ಯೆಯಲ್ಲಿ, ನೂತನ ಯೋಜನೆಯ ವಿರುದ್ಧ ಬೀದಿಗಿಳಿದಿದೆ.

ADVERTISEMENT

ಪಿಂಚಣಿ ಮೊತ್ತ ಲೆಕ್ಕಹಾಕುವ ನಿಯಮಗಳಿಗೂ ಸರ್ಕಾರ ತಿದ್ದುಪಡಿ ತಂದಿದೆ. ಈ ಹಿಂದೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ, ಸರ್ಕಾರಿ ನೌಕರನ ಪಿಂಚಣಿ ಲೆಕ್ಕಹಾಕಲು ಆತನ ಸೇವಾವಧಿಯ ಕೊನೆಯ ಆರು ತಿಂಗಳ ಸರಾಸರಿ ವೇತನವನ್ನು ಪರಿಗಣಿಸಲಾಗುತ್ತಿತ್ತು. ಖಾಸಗಿ ನೌಕರರ 25 ವರ್ಷಗಳ ಸರಾಸರಿ ವೇತನವನ್ನು ಪರಿಗಣಿಸಿ ಪಿಂಚಣಿ ನಿಗದಿ ಮಾಡಲಾಗುತ್ತಿತ್ತು. ನೂತನ ಯೋಜನೆಯಲ್ಲಿ ಈ ಎರಡೂ ಪದ್ಧತಿಗಳನ್ನು ಕೈಬಿಡಲಾಗಿದೆ. ಬದಲಿಗೆ ಯಾವುದೇ ನೌಕರ ತನ್ನ ಸೇವಾವಧಿಯಲ್ಲಿ ಎಷ್ಟು ದಿನ ಕೆಲಸ ಮಾಡಿದ್ದಾನೆ ಎಂಬುದನ್ನು ಪರಿಗಣಿಸಿ ಪಿಂಚಣಿ ನಿಗದಿ ಮಾಡಲಾಗುತ್ತದೆ. ಇದರಿಂದ ಕಡಿಮೆ ಸೇವಾವಧಿಯ ಹುದ್ದೆಯಲ್ಲಿ ಇರುವವರಿಗೆ, ಕಡಿಮೆ ಮೊತ್ತದ ಪಿಂಚಣಿ ನಿಗದಿಯಾಗುತ್ತದೆ. ಇದು ಸಹ ಕಾರ್ಮಿಕರ ಸಿಟ್ಟಿಗೆ ಕಾರಣವಾಗಿದೆ.

ಈ ಬದಲಾವಣೆಯಿಂದ ಸರ್ಕಾರದ ಹೊಣೆ ಕಡಿಮೆಯಾಗುತ್ತದೆ, ಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ. ಮ್ಯಾಕ್ರನ್ ಅವರ ಕೆಲವು ಮಾತುಗಳೂ ಇದನ್ನೇ ಪುಷ್ಟೀಕರಿಸುತ್ತವೆ. ನೂತನ ಪಿಂಚಣಿ ಯೋಜನೆಯನ್ನು ಸಮರ್ಥಿಸಿಕೊಂಡು ಮ್ಯಾಕ್ರನ್‌ ಈಚೆಗೆ ಮಾತನಾಡಿದ್ದರು. ‘ನಾನು ದುಡಿಮೆ ಆರಂಭಿಸಿದಾಗ, ದೇಶದಲ್ಲಿ ಪಿಂಚಣಿ ಪಡೆಯುವವರ ಸಂಖ್ಯೆ 1 ಕೋಟಿ ಇತ್ತು. ಈಗ ಆ ಸಂಖ್ಯೆ 1.7 ಕೋಟಿಗೆ ಏರಿಕೆಯಾಗಿದೆ’ ಎಂದು ಹೇಳಿದ್ದರು. ಫ್ರಾನ್ಸ್‌ನ ಒಟ್ಟು ಜನಸಂಖ್ಯೆಯೇ 6.7 ಕೋಟಿ. ಫ್ರಾನ್ಸ್‌‌ ತನ್ನ ಜಿಡಿಪಿಯ ಶೇ 14ರಷ್ಟು ಮೊತ್ತವನ್ನು ಪಿಂಚಣಿಗೆ ವ್ಯಯಿಸುತ್ತದೆ. ಇದರಲ್ಲಿ ಜನರ ದೇಣಿಗೆ ಮತ್ತು ಸರ್ಕಾರದ ದೇಣಿಗೆಯೂ ಸೇರಿದೆ. ನೂತನ ಯೋಜನೆಯಿಂದ ಈ ಪ್ರಮಾಣ ಕಡಿಮೆಯಾಗಲಿದೆ. ಆದರೆ ಇದರಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ.

‘ದೇಶದ ಪಿಂಚಣಿ ಯೋಜನೆಯನ್ನು ಸುಧಾರಿಸುವ ಅವಶ್ಯಕತೆ ಇತ್ತು. ಆದರೆ ಆ ಸುಧಾರಣೆ ಈ ಸ್ವರೂಪದ್ದು ಆಗಿರಬೇಕಿರಲಿಲ್ಲ. 2010ರಲ್ಲಿ ನಿವೃತ್ತಿ ಮತ್ತು ಪಿಂಚಣಿ ಅರ್ಹತೆಯ ವಯಸ್ಸನ್ನು 60 ವರ್ಷಗಳಿಂದ 62 ವರ್ಷಗಳಿಗೆ ಏರಿಕೆ ಮಾಡಲಾಗಿತ್ತು. ಈಗ ಆ ನಿವೃತ್ತಿಯ ವಯಸ್ಸನ್ನು 60 ವರ್ಷಕ್ಕೆ ಇಳಿಸಬೇಕು ಎಂಬುದು ಕಾರ್ಮಿಕ ವರ್ಗದ ಬೇಡಿಕೆಯಾಗಿತ್ತು. ಆದರೆ ಸರ್ಕಾರವು ನಿವೃತ್ತಿ ವಯಸ್ಸನ್ನು 64ಕ್ಕೆ ಏರಿಕೆ ಮಾಡಿದೆ. ಇದು ಕಾರ್ಮಿಕ ವರ್ಗವನ್ನು ಸಿಟ್ಟಿಗೇಳಿಸಿದೆ. ಈ ಬಗ್ಗೆ ಸರ್ಕಾರವು ಮಾತುಕತೆಗೆ ಬರುವುದಾದರೆ, ನಾವು ಸಿದ್ಧರಿದ್ದೇವೆ. ಆದರೆ, ಮಾತುಕತೆಗೆ ಸರ್ಕಾರವೇ ಮೊದಲ ಹೆಜ್ಜೆ ಇಡಬೇಕು’ ಎಂಬುದು ಕಾರ್ಮಿಕ ಸಂಘಟನೆಗಳ ಒತ್ತಾಯ. ಸರ್ಕಾರವೂ ತನ್ನ ಪಟ್ಟು ಬಿಡುತ್ತಿಲ್ಲ. ಹೀಗಾಗಿಯೇ ನೂತನ ಪಿಂಚಣಿ ಯೋಜನೆಯ ವಿರುದ್ಧದ ಹೋರಾಟ ಮುಂದುವರಿದಿದೆ.

ಸಾಮಾಜಿಕ ಭದ್ರತೆ ಯೋಜನೆ: ಫ್ರಾನ್ಸ್ ಮಾದರಿ

ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಸಾಮಾಜಿಕ ಭದ್ರತೆ ಯೋಜನೆಗಳ ಜಾರಿಯಲ್ಲಿ ಫ್ರಾನ್ಸ್ ಮುಂಚೂಣಿಯಲ್ಲಿದೆ. ಬಜೆಟ್‌ನಲ್ಲಿ ಸರಿಸುಮಾರು ಶೇ 31ರಷ್ಟು ಪಾಲನ್ನು ಸಾಮಾಜಿಕ ಭದ್ರತೆ ಯೋಜನೆಗಳಿಗೆ ಫ್ರಾನ್ಸ್ ವಿನಿಯೋಗಿಸುತ್ತಿದೆ. ಈ ವಿಚಾರದಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿದೆ ಎಂದು ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋಆಪರೇಷನ್ ಅಂಡ್ ಡೆವಲಪ್‌ಮೆಂಟ್ (ಒಇಸಿಡಿ) ವರದಿ ಹೇಳುತ್ತದೆ.

ದೇಶದ ಜನರ ಸಾಮಾಜಿಕ ಜೀವನದ ಭದ್ರತೆಗೆ ಅಗತ್ಯವಿರುವ ಕ್ರಮಗಳನ್ನು ಫ್ರಾನ್ಸ್‌ನಲ್ಲಿ ಬಹು ಹಿಂದಿನಿಂದಲೂ ತೆಗೆದುಕೊಳ್ಳಲಾಗಿದೆ. ಆರೋಗ್ಯ, ನಿವೃತ್ತಿ, ಪಿಂಚಣಿ, ವೃದ್ಧಾಪ್ಯ ಸೇರಿದಂತೆ ಹಲವು ವಲಯಗಳಲ್ಲಿ ಜನರಿಗೆ ಹಣಕಾಸಿನ ಭದ್ರತೆಯನ್ನು ಖಚಿತಪಡಿಸಲಾಗಿದೆ.

ದೇಶದ ದುಡಿಯುವ ವರ್ಗದ ಎಲ್ಲರನ್ನು ಜನರಲ್ ಸ್ಕೀಮ್‌ಗೆ ಒಳಪಡಿಸುವ ನೀತಿಯನ್ನು ಅನುಸರಿಸಲಾಗುತ್ತಿದೆ. ಇದು ಕಡ್ಡಾಯ ಯೋಜನೆ. ಖಾಸಗಿ ವಲಯದ ಉದ್ದಿಮೆಗಳು, ವ್ಯಾಪಾರ ಹಾಗೂ ಸೇವಾ ವಲಯದ ವೇತನದಾರರು ಈ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ 2018ರ ಬಳಿಕ ಯೋಜನೆಯನ್ನು ವಿಸ್ತರಿಸುವ ಮಹತ್ವದ ತೀರ್ಮಾನವನ್ನು ಫ್ರಾನ್ಸ್ ಪ್ರಕಟಿಸಿತ್ತು.

ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಜನರಲ್ ಸ್ಕೀಮ್‌ಗೆ ತಮ್ಮ ಪಾಲು ನೀಡಬೇಕಿದೆ. ಉದ್ಯೋಗಿಯೊಬ್ಬರು ನೌಕರಿಗೆ ಸೇರಿಕೊಳ್ಳುವ ಮುನ್ನ ಸಾಮಾಜಿಕ ಭದ್ರತಾ ಯೋಜನೆಗೆ ನೋಂದಣಿ ಮಾಡಿಕೊಳ್ಳಲೇಬೇಕು ಎಂಬ ನಿಯಮ ತರಲಾಗಿದೆ. ಇದರಿಂದ ಉದ್ಯೋಗಿಯ ಹಣಕಾಸಿನ ಭದ್ರತೆಯನ್ನು ಸರ್ಕಾರ ಖಚಿತಪಡಿಸಿದೆ. ಒಂದು ವೇಳೆ, ವೇತನದಾರರು ತಮ್ಮ ಪಾಲಿನ ಹಣವನ್ನು ಪಾವತಿಸದೇ ಹಿಡಿದಿಟ್ಟುಕೊಳ್ಳುವುದು ಅಥವಾ ವಿಳಂಬ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಇಂತಹ ನೌಕರಸ್ನೇಹಿ ಕ್ರಮಗಳಿಂದಾಗಿ ಫ್ರಾನ್ಸ್ ಪ್ರಶಂಸೆ ಗಳಿಸಿದೆ.

ಸಾಮಾಜಿಕ ಭದ್ರತೆ ಯೋಜನೆಯಡಿ ಸಂಗ್ರಹಿಸಲಾದ ಹಣವನ್ನು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ವೈದ್ಯಕೀಯ ವೆಚ್ಚ ಮರುಪಾವತಿ, ಹೆರಿಗೆ ರಜೆ, ಕೈಗಾರಿಕಾ ಸ್ಥಳಗಳಲ್ಲಿ ಸಂಭವಿಸುವ ಅಪಘಾತ ವೆಚ್ಚ ಪರಿಹಾರ, ಮೂಲ ಪಿಂಚಣಿ ಪಾವತಿ, ಕೌಟುಂಬಿಕ ಪರಿಹಾರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತದೆ.

l ಸಾರ್ವತ್ರಿಕ ಆರೋಗ್ಯ ಯೋಜನೆಯಡಿ (ಪಿಯುಎಂಎ) ಫ್ರಾನ್ಸ್ ತನ್ನ ಎಲ್ಲ ನಾಗರಿಕರಿಗೆ ಆರೋಗ್ಯ ಸೇವೆ ನೀಡುತ್ತದೆ. ಜನರು ತಮ್ಮ ವೇತನದ ಶೇ 6.5ರಷ್ಟು ಪಾವತಿ ಮಾಡಿದರೆ ಆರೋಗ್ಯ ಸೇವೆ ನೀಡಲಾಗುತ್ತದೆ. ಕೆಲವು ವಲಯದವರಿಗೆ ಪಾವತಿಯಲ್ಲಿ ವಿನಾಯಿತಿ ಇದೆ. ವೈದ್ಯಕೀಯ ಸೇವೆ, ವೈದ್ಯಕೀಯ ರಜೆ ಹಾಗೂ ನಗದು ಪಾವತಿಯಂತಹ ಸವಲತ್ತುಗಳು ಈ ಯೋಜನೆಯಡಿ ಸಿಗುತ್ತವೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಥಳೀಯ ಆರೋಗ್ಯ ವಿಮೆ ನಿಧಿಯಡಿ ಪರಿಹಾರ ನೀಡಲಾಗುತ್ತದೆ.

l ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರು, ಕೆಲಸದ ಸ್ಥಳದಲ್ಲಿ ಸಂಭವಿಸುವ ಆಕಸ್ಮಿಕ ಅವಘಡಗಳಿಗೆ ತುತ್ತಾದರೆ ಪರಿಹಾರ ನೀಡುವ ಯೋಜನೆಯಿದೆ. ವೈದ್ಯಕೀಯ ವೆಚ್ಚ ಭರಿಸುವುದರ ಜತೆಗೆ ವೇತನಸಹಿತ ರಜೆಯನ್ನು ನೀಡಲಾಗು
ತ್ತದೆ. ಉದ್ಯೋಗಿಯು ದೈಹಿಕ ಅಸಾಮರ್ಥ್ಯಕ್ಕೆ ಒಳಗಾದರೆ, ಬದುಕಿರುವವರೆಗೂ ವೇತನದಷ್ಟೇ ಪಿಂಚಣಿ ನೀಡುವ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ.

l ದೇಶದ ಎಲ್ಲ ಜನರು ಹಾಗೂ ಎಲ್ಲ ವರ್ಗದ ಉದ್ಯೋಗಿಗಳಿಗೂ ಅನ್ವಯವಾಗುವ ‘ಕೌಟುಂಬಿಕ ಸೌಲಭ್ಯ ನಿಧಿ’ ಯೋಜನೆ ಫ್ರಾನ್ಸ್‌ನಲ್ಲಿ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಿದೆ. ಮಕ್ಕಳೂ ವ್ಯಾಪ್ತಿಗೆ ಬರುತ್ತಾರೆ.

l ‘ನಿರುದ್ಯೋಗ ವಿಮೆ ಯೋಜನೆ’ ಪರಿಚಯಿಸಲಾಗಿದ್ದು, ಸಾಮಾನ್ಯ ಯೋಜನೆಗೆ ಹಾಗೂ ಕೃಷಿ ಯೋಜನೆಗೆ ಒಳಪಡುವ ಎಲ್ಲ ಸದಸ್ಯರು ಈ ಯೋಜನೆಗೂ ಒಳಪಡುತ್ತಾರೆ. ಹೆಚ್ಚುವರಿ ಪಿಂಚಣಿ ಯೋಜನೆಯೂ ಜಾರಿಯಲ್ಲಿದ್ದು, ಇದನ್ನು ಹೆಚ್ಚುವರಿಯಾಗಿ ಖರೀದಿಸಬೇಕಿದೆ.

ಆಧಾರ: ಬಿಬಿಸಿ, ರಾಯಿಟರ್ಸ್‌, ಒಇಸಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.