ADVERTISEMENT

ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 23:32 IST
Last Updated 1 ಜೂನ್ 2025, 23:32 IST
ಒಪಾಲ್ ಸುಚಾತಾ ಚೌಂಗಶ್ರೀ
ಒಪಾಲ್ ಸುಚಾತಾ ಚೌಂಗಶ್ರೀ   

ಹೈದರಾಬಾದ್: ಪ್ರಸಕ್ತ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಥಾಯ್ಲೆಂಡಿನ ಒಪಾಲ್ ಸುಚಾತಾ ಚೌಂಗಶ್ರೀ, ಈ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧವೂ ಹೋರಾಡಿದ್ದರು.

‘ಅವರಿಗಿದ್ದ ಕ್ಯಾನ್ಸರ್‌ ಜೀವಕ್ಕೆ ಹಾನಿಕಾರಕವಾಗಿರದಿದ್ದರೂ, ಕಾಯಿಲೆ ಪತ್ತೆಯಾದಾಗ ಸುಚಾತಾ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದರು. ಆತಂಕ ಮನೆ ಮಾಡಿತ್ತು. ಭವಿಷ್ಯದ ದಿನಗಳ ಬಗ್ಗೆ ಅವರಲ್ಲಿ ಅನಿಶ್ಚಿತತೆಯ ಕಾರ್ಮೋಡ ಆವರಿಸಿತ್ತು’ ಎಂದು ವಿಶ್ವ ಸುಂದರಿ ಸ್ಪರ್ಧೆ ಸಂಘಟಕರು ಹೇಳುತ್ತಾರೆ.

ಕ್ಯಾನ್ಸರ್‌ ವಿರುದ್ಧ ನಡೆಸಿದ ಹೋರಾಟ, ಅನುಭವಿಸಿದ ಯಾತನೆ, ಕಹಿ ಅನುಭವಗಳು ಅವರನ್ನು ಈ ಪ್ರತಿಷ್ಟಿತ ಸ್ಪರ್ಧೆಯ ಭಾಗವಾಗುವಂತೆ ಮಾಡಿತ್ತು. ಅಲ್ಲದೇ, ಸ್ತನ ಕ್ಯಾನ್ಸರ್‌ ಕುರಿತು ದೇಶದಾದ್ಯಂತ ಜಾಗೃತಿ ಮೂಡಿಸುವ ಆಂದೋಲನ ‘ಒಪಾಲ್‌ ಫಾರ್‌ ಹರ್’ ಕಾರ್ಯಕ್ರಮದ ಭಾಗವಾಗಲು ಪ್ರೇರಣೆ ನೀಡಿದೆ.

ADVERTISEMENT

ಸ್ತನ ಕ್ಯಾನ್ಸರ್‌ ಕುರಿತು ಶಿಕ್ಷಣ ನೀಡುವುದು, ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದು ಹಾಗೂ ಕಾಯಿಲೆಯಿಂದ ಗುಣಮುಖರಾದವರ ಸಬಲೀಕರಣದಂತಹ ಕಾರ್ಯಗಳನ್ನು ‘ಒಪಾಲ್‌ ಫಾರ್ ಹರ್’ ನಡಿ ಕೈಗೊಳ್ಳಲಾಗುತ್ತದೆ.

‘ತಮಗೆ ಕ್ಯಾನ್ಸರ್‌ ಇರುವುದು ಪತ್ತೆಯಾದ ನಂತರ ಎಷ್ಟೊ ಮಹಿಳೆಯರು ಮೌನವಾಗಿಯೇ ನೋವು ಅನುಭವಿಸುತ್ತಾರೆ. ಕಾಯಿಲೆ ಬಗ್ಗೆ ಸಮಾಜದಲ್ಲಿರುವ ಕಳಂಕ, ಅರಿವಿನ ಕೊರತೆ ಅಥವಾ ಚಿಕಿತ್ಸೆ ಪಡೆಯಲು ಅಗತ್ಯವಿರುವಷ್ಟು ಆರ್ಥಿಕ ಶಕ್ತಿ ಇಲ್ಲದೇ ಇರುವುದು ಕಾಯಿಲೆ ಪೀಡಿತರು ನೋವು ಅನುಭವಿಸುವಂತೆ ಮಾಡುತ್ತದೆ ಎಂಬುದನ್ನು ಸುಚಾತಾ ಅರ್ಥ ಮಾಡಿಕೊಂಡಿದ್ದರು’ ಎಂದೂ ಸಂಘಟಕರು ಹೇಳುತ್ತಾರೆ.

ಒಪಾಲ್ ಸುಚಾತಾ ಚೌಂಗಶ್ರೀ

ಸ್ತನ ಕ್ಯಾನ್ಸರ್‌ ಯಾರಿಗೂ ಮತ್ತು ಯಾವ ವಯಸ್ಸಿನವರಿಗೂ ಬರಬಹುದು.  ಇದು ಕಟು ವಾಸ್ತವ. ಹೀಗಾಗಿ, ಯುವತಿಯರು ಇದರ ಬಗ್ಗೆ ಅರಿವು ಹೊಂದಿರಬೇಕು ಎಂದು ಸುಚಾತಾ ಪ್ರತಿಪಾದಿಸುತ್ತಾರೆ.

‘ಪಾಡ್‌ಕಾಸ್ಟ್‌ಗಳ ಮೂಲಕ ಕ್ಯಾನ್ಸರ್ ಕುರಿತು ಅರಿವು ಮೂಡಿಸುವುದು, ವಿವಿಧ ಆಸ್ಪತ್ರೆಗಳ ಸಹಕಾರದೊಂದಿಗೆ ಉಚಿತ ಸ್ತನ ಕ್ಯಾನ್ಸರ್‌ ಪತ್ತೆ ಶಿಬಿರಗಳ ಆಯೋಜನೆ, ಥಾಯ್ಲೆಂಡ್‌ನ ಆರೋಗ್ಯ ಸಚಿವರು, ಅರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ನ್ಯಾಷನಲ್ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನ ವೈದ್ಯರನ್ನು ಭೇಟಿ ಮಾಡಿ, ನೀತಿ ನಿರೂಪಣೆಗೆ ಪ್ರಯತ್ನಿಸುವುದು ‘ಒಪಾಲ್‌ ಫಾರ್‌ ಹರ್’ ಕಾರ್ಯಕ್ರಮದ ಭಾಗವಾಗಿವೆ. ಈ ಉದ್ದೇಶಕ್ಕಾಗಿ ಅಗತ್ಯವಿರುವಷ್ಟು ನಿಧಿ ಸಂಗ್ರಹಿಸಲು ಕೂಡ ಅವರು ಶಕ್ತರಾಗಿದ್ದಾರೆ’ ಎಂದು ಹೇಳುತ್ತಾರೆ.

ಕಾಳಜಿ ಕೊರತೆ ಅಥವಾ ಭಯದ ಕಾರಣದಿಂದಾಗಿ ಯಾವ ಮಹಿಳೆಯೂ ನಿರ್ಲಕ್ಷಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವುದು ನನ್ನ ಗುರಿ
ಒಪಾಲ್ ಸುಚಾತಾ ಚೌಂಗಶ್ರೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.