ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನ್‌ನ ಬಂಡುಕೋರ ಗುಂಪು ಹಮಾಸ್ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಇಸ್ರೇಲ್ ಸೈನಿಕರು
– ಎಎಫ್‌ಪಿ ಚಿತ್ರ
ಕೈರೊ (ಎಪಿ): ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಮಾಸ್ ಬಂಡುಕೋರ ಸಂಘಟನೆಯ ಪ್ರತಿನಿಧಿಗಳು ಈಜಿಪ್ಟ್‌ನಲ್ಲಿ ಸತತ ಎರಡನೇ ದಿನವಾದ ಮಂಗಳವಾರವೂ ಮಾತುಕತೆ ನಡೆಸಿದರು.
ಅಮೆರಿಕವು ಸಿದ್ಧಪಡಿಸಿದ ಶಾಂತಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಕೈರೊದ ಶರ್ಮ್ ಎಲ್ ಶೇಖ್‌ನಲ್ಲಿ ಸೋಮವಾರ ಮಾತುಕತೆ ಆರಂಭಿಸಿದ್ದಾರೆ.
ಟ್ರಂಪ್ ಮುಂದಿಟ್ಟಿರುವ ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನದ ಕುರಿತು ಸೋಮವಾರ ಹಲವು ಗಂಟೆಗಳ ಮಾತುಕತೆ ನಡೆಯಿತು ಎಂದು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕದನ ವಿರಾಮ ಘೋಷಣೆ, ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಇಸ್ರೇಲ್ ಬಂಧನದಲ್ಲಿ ಇರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕತಾರ್ ಮತ್ತು ಈಜಿಪ್ಟ್‌ನ ಸಮಾಲೋಚಕರು ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದಾರೆ. ಮೊದಲು ಹಮಾಸ್ ನಿಯೋಗದ ಜತೆ ಸಭೆ ನಡೆಸಿದ ಸಮಾಲೋಚಕರು ಆ ಬಳಿಕ ಇಸ್ರೇಲ್‌ನ ನಿಯೋಗವನ್ನು ಭೇಟಿಯಾಗಿದ್ದಾರೆ.
ಯುದ್ಧಕ್ಕೆ ಎರಡು ವರ್ಷ: ಇಸ್ರೇಲ್–ಹಮಾಸ್ ಯುದ್ಧ ಮಂಗಳವಾರಕ್ಕೆ (ಅ.7) ಎರಡು ವರ್ಷ ಪೂರೈಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯೊಂದಿಗೆ ಯುದ್ಧ ಆರಂಭವಾಗಿತ್ತು. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿಗರು ಮೃತಪಟ್ಟಿದ್ದರು. ಬಂಡುಕೋರರು 251 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.
ಆ ಬಳಿಕ ಇಸ್ರೇಲ್ ನಡೆಸಿದ ನಿರಂತರ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ 67 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.