ADVERTISEMENT

ಜರ್ಮನಿ ಚಾನ್ಸಲರ್ ಸ್ಕೋಲ್ಜ್ ‘ಅಸಮರ್ಥ ಮೂರ್ಖ’, ತಕ್ಷಣ ರಾಜೀನಾಮೆ ನೀಡಬೇಕು: ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2024, 6:17 IST
Last Updated 21 ಡಿಸೆಂಬರ್ 2024, 6:17 IST
<div class="paragraphs"><p>ಇಲಾನ್‌ ಮಸ್ಕ್ ಮತ್ತು&nbsp;ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್</p></div>

ಇಲಾನ್‌ ಮಸ್ಕ್ ಮತ್ತು ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್

   

ಬರ್ಲಿನ್: ಮಧ್ಯ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ನಡೆದ ದಾಳಿಯನ್ನು ಉದ್ಯಮಿ ಇಲಾನ್‌ ಮಸ್ಕ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆ ಸಂಬಂಧ ‘ಎಕ್ಸ್‌’ನಲ್ಲಿ ವಿಡಿಯೊ ಸಮೇತ ಪೋಸ್ಟ್‌ ಮಾಡಿರುವ ಅವರು, ‘ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಒಬ್ಬ ‘ಅಸಮರ್ಥ ಮೂರ್ಖ’, ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಈಚೆಗೆ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ಜೊತೆಗೆ ಟೆಸ್ಲಾ ಮಾಲೀಕ ಇಲಾನ್‌ ಮಸ್ಕ್‌ ಅವರನ್ನೂ ಡಿಒಜಿಇ ಉಸ್ತುವಾರಿಯಾಗಿ ನೇಮಿಸಿದ್ದರು.

ಶುಕ್ರವಾರ ರಾತ್ರಿ ಮಧ್ಯ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಕ್ರಿಸ್‌ಮಸ್ ಮಾರುಕಟ್ಟೆಗೆ ಚಾಲಕನೊಬ್ಬ ಏಕಾಏಕಿ ವಾಹನವನ್ನು ನುಗ್ಗಿಸಿದ್ದಾನೆ. ಘಟನೆಯಲ್ಲಿ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 65ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಲಕನನ್ನು 50 ವರ್ಷದ ಸೌದಿ ಅರೇಬಿಯಾ ಪ್ರಜೆ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ 2006ರಲ್ಲಿ ಜರ್ಮನಿಗೆ ಬಂದು ನೆಲೆಸಿದ್ದರು. ಮ್ಯಾಗ್ಡೆಬರ್ಗ್‌ನ ಪಟ್ಟಣವೊಂದರಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ವ್ಯಕ್ತಿ ಕಾರನ್ನು ಬಾಡಿಗೆಗೆ ಪಡೆದು ನೇರವಾಗಿ ಮಾರುಕಟ್ಟೆಗೆ ತೆರಳಿದ್ದಾನೆ. ಕಾರಿನಲ್ಲಿ ಸ್ಫೋಟಕಗಳಿವೆಯೇ ಮತ್ತು ಚಾಲಕ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ಘಟನೆಯು 2016ರಲ್ಲಿ ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ನೆನಪಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಬಂಧ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್, ‘ನಾವು ಮ್ಯಾಗ್ಡೆಬರ್ಗ್‌ನ ಸಂತ್ರಸ್ತರು ಅವರ ಕುಟುಂಬದವ ಜೊತೆಗಿದ್ದೇವೆ. ಈ ಆತಂಕದ ಸಮಯದಲ್ಲಿ ತಕ್ಷಣ ಕಾರ್ಯಪ್ರವೃತ್ತ ರಕ್ಷಣಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.