ADVERTISEMENT

ಎಚ್‌–1ಬಿ ವೀಸಾಗೆ ಶುಲ್ಕ: ಟ್ರಂಪ್ ಆಡಳಿತದ ವಿರುದ್ಧ 19 ರಾಜ್ಯಗಳಿಂದ ಮೊಕದ್ದಮೆ

ಪಿಟಿಐ
Published 13 ಡಿಸೆಂಬರ್ 2025, 7:02 IST
Last Updated 13 ಡಿಸೆಂಬರ್ 2025, 7:02 IST
<div class="paragraphs"><p>ಡೊನಾಲ್ಟ್ ಟ್ರಂಪ್</p></div>

ಡೊನಾಲ್ಟ್ ಟ್ರಂಪ್

   

 ಪಿಟಿಐ ಚಿತ್ರಗಳು

ನವದೆಹಲಿ: ಎಚ್‌–1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕವನ್ನು ವಿಧಿಸಿದ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ 19 ರಾಜ್ಯಗಳು ದೂರು ದಾಖಲಿಸಿವೆ. ಟ್ರಂಪ್ ಅವರ ನಡೆಯಿಂದ ಆರೋಗ್ಯ, ಶಿಕ್ಷಣ ಹಾಗೂ ತಂತ್ರಜ್ಞಾನ ಸೇರಿ ಪ್ರಮುಖ ವಲಯಗಳಲ್ಲಿ ಕಾರ್ಮಿಕರ ಭಾರಿ ಕೊರತೆಗೆ ಕಾರಣವಾಗಲಿದೆ ಎಂದು ಹೇಳಿವೆ.

ADVERTISEMENT

ನ್ಯೂಯಾರ್ಕ್ ಅಟಾರ್ನಿ ಜನರಲ್ ಲತಿಶಿಯಾ ಜೇಮ್ಸ್ ಹಾಗೂ ಇನ್ನಿತರ 18 ಅಟಾರ್ನಿಗಳು ಶುಕ್ರವಾರ ಮ್ಯಾಸಚೂಸೆಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಕಾನೂನಾತ್ಮಕವಾದ ಯಾವುದೇ ಅಧಿಕಾರ ಅಥವಾ ಸರಿಯಾದ ಕಾನೂನು ಪ್ರಕ್ರಿಯೆಗಳು ಇಲ್ಲದೆ ಎಚ್‌–1ಬಿ ವೀಸಾಗೆ ಭಾರಿ ಶುಲ್ಕ ಹೇರಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಹೊಸ ಶುಲ್ಕವು ಆರೋಗ್ಯ, ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಎಚ್-1ಬಿ ಕಾರ್ಮಿಕರನ್ನು ಅವಲಂಬಿಸಿರುವ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗದಾತರ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅವರು ವಾದಿಸಿದ್ದಾರೆ.

ದೇಶದಾದ್ಯಂತ ಅಗತ್ಯ ಇರುವವರ ಸೇವೆ ಮಾಡಲು ವೈದ್ಯರು, ದಾದಿಯರು, ಶಿಕ್ಷಕರು ಹಾಗೂ ಇತರ ಕೆಲಸಗಾರರಿಗೆ ಎಚ್‌–1ಬಿ ವೀಸಾ ಅನುಮತಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನು ಹಾಳುಮಾಡುವ ಆಡಳಿತದ ಈ ಪ್ರಯತ್ನ ಆರೋಗ್ಯ, ಮಕ್ಕಳಿಗೆ ಶಿಕ್ಷಣ ನೀಡಲು ನ್ಯೂಯಾರ್ಕ್‌ ನಿವಾಸಿಗಳಿಗೆ ಕಷ್ಟವಾಗುವಂತೆ ಮಾಡುತ್ತದೆ. ನಮ್ಮ ಆರ್ಥಿಕತೆಗೂ ಹೊಡೆತ ಬೀಳುತ್ತದೆ. ವಲಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಅವ್ಯವಸ್ಥೆ ಮತ್ತು ಕ್ರೌರ್ಯವನ್ನು ನಿಲ್ಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ ಎಂದು ಜೇಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಚ್‌–1ಬಿ ವೀಸಾದ ಮೇಲೆ ಹೇರಿರುವ ಶುಲ್ಕವು ಕಾನೂನು ಬಾಹಿರ ಎಂದಿರುವ ಅಟಾರ್ನಿಗಳು, ಟ್ರಂಪ್ ಅವರ ಈ ನಡೆ ಆಡಳಿತಾತ್ಮಕ ಕಾರ್ಯವಿಧಾನದ ಕಾಯ್ದೆ ಹಾಗೂ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಉಲ್ಲಂಘನೆ. ಸಂಸತ್ತಿನ ಒಪ್ಪಿಗೆ ಇಲ್ಲದೆ ಹಾಗೂ ಅಗತ್ಯವಿರುವ ಕಾನೂನು ಪಾಲಿಸದೇ ಈ ನಿಯಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್, ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲೊರಾಡೋ, ಕನೆಕ್ಟಿಕಟ್, ಡೆಲಾವೇರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿಚಿಗನ್, ಮಿನ್ನೇಸೋಟ, ಉತ್ತರ ಕೆರೊಲಿನಾ, ನ್ಯೂಜೆರ್ಸಿ, ಒರೆಗಾನ್, ರೋಡ್ ಐಲೆಂಡ್, ವರ್ಮೊಂಟ್, ವಾಷಿಂಗ್ಟನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳ ಅಟಾರ್ನಿಗಳು ಈ ಮೊಕದ್ದಮೆ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.