ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಪುರೋಹಿತ (ಸನ್ಯಾಸಿ) ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ನಾಯಕ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ.
ರಾಜಧಾನಿಯಿಂದ 300 ಕೀ.ಮೀಟರ್ ದೂರದಲ್ಲಿರುವ ರಂಗಪುರದಲ್ಲಿ ಕೆಲ ದಿನಗಳ ಹಿಂದೆ ಹಿಂದೂ ಸಮುದಾಯದವರು ನಡೆಸಿದ ಪ್ರತಿಭಟನೆಗಳ ನಂತರ ಈ ಬಂಧನ ನಡೆದಿದೆ. ಆದಾಗ್ಯೂ ಬಾಂಗ್ಲಾದ ಅಧಿಕಾರಿಗಳು ಈ ಬಂಧನವನ್ನು ದೃಢಪಡಿಸಿಲ್ಲ.
ಇಸ್ಕಾನ್ ಪ್ರತಿನಿಧಿ ರಾಧಾರಮಣ್ ದಾಸ್ ಅವರು ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಬಾಂಗ್ಲಾ ಪೊಲೀಸರು ಬಂಧಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ಯದಿದ್ದಾರೆ ಎಂಬ ಆಘಾತಕಾರಿ ಸುದ್ದಿ ನನಗೆ ತಲುಪಿದೆ. ದಯವಿಟ್ಟು ಗಮನಿಸಿ, ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತೀಯ ಹೈ ಕಮಿಷನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಈ ವಾರದ ಆರಂಭದಲ್ಲಿ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿದ್ದ ಹಿಂಸಾಚಾರ ವಿರೋಧಿಸಿ ತಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ನಂತರ ಈ ಬಂಧನ ನಡೆದಿದೆ.
ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪ ಎದುರಿಸುತ್ತಿರುವ ‘ಸಮ್ಮಿಲಿತ್ ಸನಾತನಿ ಜಾಗರಣ ಜೋತೆ’ ಎಂಬ ಹಿಂದೂ ಸಂಘಟನೆಯ ನಾಯಕ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಜಾಮೀನು ಅರ್ಜಿಯನ್ನು ಬಾಂಗ್ಲಾದೇಶದ ನ್ಯಾಯಾಲಯ ವಜಾಗೊಳಿಸಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ. ‘ಛಠಗಾವ್‌ನ ಆರನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಖಾಜಿ ಷರೀಫುಲ್ ಇಸ್ಲಾಂ ಅವರು ಈ ಆದೇಶ ನೀಡಿದ್ದಾರೆ’ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
‘ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾ ಮಾಡುತ್ತಿದ್ದಂತೆಯೇ, ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದರು, ಘೋಷಣೆಗಳನ್ನೂ ಕೂಗಿದರು. ಚಿನ್ಮಯಿ ಅವರನ್ನು ಸೋಮವಾರ ಢಾಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು’ ಎಂದು ವರದಿಯಲ್ಲಿ ಹೇಳಲಾಗಿದೆ.
ಛಠಗಾವ್‌ನ ನೂತನ ಮಾರುಕಟ್ಟೆಯೊಂದರಲ್ಲಿ ಹಿಂದೂ ಸಮುದಾಯದವರು ರ್‍ಯಾಲಿ ನಡೆಸಿದ್ದರು. ಈ ವೇಳೆ ಪ್ರತಿಭಟನಕಾರರು ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದರು ಎಂದು ಆರೋಪಿಸಿ 19 ಜನರ ಮೇಲೆ ಅ.30ರಂದು ಪ್ರಕರಣ ದಾಖಲಾಗಿತ್ತು.
ಅಲ್ಪಸಂಖ್ಯಾತರ ಮನೆಗಳು ವ್ಯಾಪಾರಿ ಕೇಂದ್ರಗಳನ್ನು ಲೂಟಿ ಮಾಡಿದ ಬೆಂಕಿ ಹಚ್ಚಿದ ಹಾಗೂ ದೇವಾಲಯ ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸಿದ ಮತ್ತು ಅಪವಿತ್ರಗೊಳಿಸಿದ ಹಲವು ಘಟನೆಗಳು ಬಾಂಗ್ಲಾದಲ್ಲಿ ನಡೆದಿವೆ ಎಂದು ಎಂಇಎ ಉಲ್ಲೇಖಿಸಿದೆ. ‘ಈ ಕೃತ್ಯಗಳನ್ನು ನಡೆಸಿದ ದುಷ್ಕರ್ಮಿಗಳು ಮುಕ್ತವಾಗಿ ಸಂಚರಿಸುತ್ತಿದ್ದರೂ ಶಾಂತಿಯುತ ಮತ್ತು ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಧ್ವನಿಯೆತ್ತುವ ಧಾರ್ಮಿಕ ಮುಖಂಡರ ವಿರುದ್ಧ ಆರೋಪಗಳನ್ನು ಹೊರಿಸುವುದು ದುರದೃಷ್ಟಕರ’ ಎಂದು ಅದು ಹೇಳಿದೆ. ದಾಸ್ ಬಂಧನ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆದಿರುವುದು ಸರಿಯಲ್ಲ ಎಂದು ಎಂಇಎ ತಿಳಿಸಿದೆ.
‘ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾ ಮಾಡುತ್ತಿದ್ದಂತೆಯೇ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಜೊತೆಗೆ ದಾಸ್ ಅವರಿದ್ದ ಪೊಲೀಸ್ ವಾಹನದ ಸಂಚಾರವನ್ನು ತಡೆದ ಪ್ರತಿಭಟನಕಾರರು ದಾಸ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಜನರನ್ನು ಚದುರಿಸಲು ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಸಿಬ್ಬಂದಿ ಲಾಠಿ ಬೀಸಿದರು. ಬೆಳಿಗ್ಗೆ 11.45ಕ್ಕೆ ನ್ಯಾಯಾಲಯದ ಆದೇಶ ಹೊರಬಂತು. ಮಧ್ಯಾಹ್ನ 3ರ ಸುಮಾರಿಗೆ ದಾಸ್ ಅವರನ್ನು ಜೈಲಿಗೆ ಕರೆದೊಯ್ಯಲಾಯಿತು. ಶಾಂತಿ ಕಾಪಾಡುವಂತೆ ವಾಹನದ ಒಳಗಿಂದಲೇ ದಾಸ್ ಅವರು ಪ್ರತಿಭಟನಕಾರರಲ್ಲಿ ಮನವಿ ಮಾಡಿದರು. ಪ್ರತಿಭಟನಕಾರರು ‘ಜೈ ಶ್ರೀರಾಮ್’ ‘ನಮಗೆ ಜೈಲುವಾಸ ಬೇಡ ನಮಗೆ ನಮ್ಮ ಹಕ್ಕುಗಳು ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಜೊತೆಗೆ ಶಂಖಗಳನ್ನು ಎಸೆದರು.
‘ನಾವೂ ಈ ದೇಶಕ್ಕೇ ಸೇರಿದವರು’ ನಾವು ಈ ದೇಶದ ಅಥವಾ ಸರ್ಕಾರ ವಿರುದ್ಧ ಇಲ್ಲ. ನಾವು ಸನಾತನಿಗಳು ಈ ದೇಶದ ಭಾಗವೇ ಆಗಿದ್ದೇವೆ... ದೇಶವನ್ನು ಸಂಕಷ್ಟಕ್ಕೆ ದೂಡುವ ಏನನ್ನೂ ನಾವು ಮಾಡುವುದಿಲ್ಲ. ಜೊತೆಗೆ ದೇಶದ ಸೌಹಾರ್ದವನ್ನು ಹಾಳು ಮಾಡುವುದಿಲ್ಲ. ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ನಮ್ಮ ಭಾವನೆಯನ್ನೇ ಶಕ್ತಿ ಮಾಡಿಕೊಂಡು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ
‘ಬಿಟ್ಟುಬಿಡಲು ಸಾಧ್ಯವಿಲ್ಲ’ ಹಿಂದೂ ಸಮುದಾಯದ ಮುಖಂಡ ಎನ್ನುವ ಕಾರಣಕ್ಕೆ ದಾಸ್ ಅವರನ್ನು ಬಂಧಿಸಿಲ್ಲ. ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ದೇಶದ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನವನ್ನು ಯಾರೇ ನಡೆಸಿದರು ಅವರನ್ನು ಬಿಟ್ಟುಬಿಡಲು ಸಾಧ್ಯವಿಲ್ಲಆಸಿಫ್ ಮಹಮ್ಮದ್ ಸ್ಥಳೀಯ ಸರ್ಕಾರದ ವ್ಯವಹಾರಗಳ ಸಲಹೆಗಾರ ಹಾಗೂ ತಾರತಮ್ಯ ವಿರೋಧಿ ಚಳವಳಿಯ ವಿದ್ಯಾರ್ಥಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.