ಜೋ ಬೈಡನ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ‘2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುತ್ತಿದ್ದೆ, ಆದರೆ ಡೆಮಾಕ್ರಟಿಕ್ ಪಕ್ಷದ ಒಗ್ಗಟ್ಟಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿದೆ’ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಿರ್ಧಾರ ಬಗ್ಗೆ ವಿಷಾದವಿದೆಯಾ? ನಿಮ್ಮ ಆ ನಿರ್ಧಾರದಿಂದಾಗಿ ಪೂರ್ವಾಧಿಕಾರಿ ಈಗ ನಿಮ್ಮ ಉತ್ತರಾಧಿಕಾರಿಯಾಗಲು ಸುಲಭವಾಯಿತೇ?’ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ.
‘ನಾನು ಹಾಗನ್ನುವುದಿಲ್ಲ. ನಾನು ಟ್ರಂಪ್‌ರನ್ನು ಸೋಲಿಸುತ್ತಿದ್ದೆ. ಕಮಲಾ ಹ್ಯಾರಿಸ್ ಕೂಡ ಟ್ರಂಪ್ ಅವರನ್ನು ಸೋಲಿಸುತ್ತಿದ್ದರು’ ಎಂದು ಬೈಡನ್ ಪ್ರತಿಕ್ರಿಯಿಸಿದ್ದಾರೆ.
‘ಪಕ್ಷ ಒಗ್ಗಟ್ಟಾಗಿರುವುದು ಮುಖ್ಯವಾಗಿತ್ತು. ಗೆಲ್ಲುತ್ತೇನೆ ಎಂದು ನನಗೆ ವಿಶ್ವಾಸ ಇದ್ದರೂ, ಪಕ್ಷಕ್ಕೆ ಚಿಂತೆಯಾಗಿತ್ತು. ಹೀಗಾಗಿ ಪಕ್ಷ ಒಗ್ಗಟ್ಟಾಗಿರುವುದು ಒಳಿತು ಎಂದು ನಾನು ಯೋಚಿಸಿದೆ’ ಎಂದು ಬೈಡನ್ ಹೇಳಿದ್ದಾರೆ.
‘ಅಮೆರಿಕದ ಅಧ್ಯಕ್ಷನಾಗಿದ್ದು, ನನಗೆ ಜೀವನದಲ್ಲಿ ಸಿಕ್ಕ ಬಹುದೊಡ್ಡ ಗೌರವ. ಒಗ್ಗಟ್ಟಿಲ್ಲದೆ ಚುನಾವಣೆಯಲ್ಲಿ ಸೋಲನುಭವಿಸಲು ನಾನು ಕಾರಣವಾಗುವುದು ಇಷ್ಟವಿರಲಿಲ್ಲ. ಹೀಗಾಗಿ ಹಿಂದೆ ಸರಿದೆ. ಆದರೆ ಗೆಲ್ಲುವ ವಿಶ್ವಾಸ ನನಗಿತ್ತು’ ಎಂದು ಬೈಡನ್ ನುಡಿದಿದ್ದಾರೆ.
2024ರ ಜೂನ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಅಟ್ಲಾಂಟದಲ್ಲಿ ನಡೆದ ಸಂವಾದದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ, ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದಿದ್ದರು.
ಆ ಸಂವಾದಲ್ಲಿ ಹಿನ್ನಡೆಯಾದ ಬಳಿಕ ಸ್ವಪಕ್ಷೀಯರಿಂದಲೇ ಬೈಡನ್ ಟೀಕೆ ಎದುರಿಸಿದ್ದರು. ಸ್ಪರ್ಧೆಯಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸಿದ್ದರು. ಆದರೆ ಕಮಲಾ ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.