ADVERTISEMENT

ಶ್ರೀಲಂಕಾದಲ್ಲಿ ರಸಗೊಬ್ಬರಕ್ಕೆ ರೈತರ ಹೋರಾಟ: 100 ಟನ್‌ ಸಾರಜನಕ ರವಾನಿಸಿದ ಭಾರತ

ಐಎಎನ್ಎಸ್
Published 4 ನವೆಂಬರ್ 2021, 16:38 IST
Last Updated 4 ನವೆಂಬರ್ 2021, 16:38 IST
ಶ್ರೀಲಂಕಾಕ್ಕೆ ಸಾರಜನಕ ಸಾಗಿಸುತ್ತಿರುವುದು (ಟ್ವಿಟರ್‌ ಚಿತ್ರ: @IndiainSL)
ಶ್ರೀಲಂಕಾಕ್ಕೆ ಸಾರಜನಕ ಸಾಗಿಸುತ್ತಿರುವುದು (ಟ್ವಿಟರ್‌ ಚಿತ್ರ: @IndiainSL)   

ಕೊಲಂಬೊ:ಸಂಪೂರ್ಣ ಸಾವಯವ ಕೃಷಿ ಸಾಧಿಸುವ ನಿಟ್ಟಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯನ್ನು ನಿಷೇಧಿಸುವ ಶ್ರೀಲಂಕಾ ಸರ್ಕಾರದ ಹಠಾತ್ ನಿರ್ಧಾರದಿಂದ ಅಲ್ಲಿ ರಸಗೊಬ್ಬರಕ್ಕಾಗಿ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರತವು ವಾಯುಪಡೆಯ ಎರಡು ವಿಮಾನಗಳ ಮೂಲಕ ಶ್ರೀಲಂಕಾಕ್ಕೆ ನ್ಯಾನೋ ಸಾರಜನಕ ಗೊಬ್ಬರವನ್ನು ರವಾನಿಸಿದೆ.

‘ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಎರಡು ಐಎಎಫ್‌ ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳು 1,00,000 ಕೆಜಿ ನ್ಯಾನೊ ಸಾರಜನಕದೊಂದಿಗೆ ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು. ಈ ಬೆಳವಣಿಗೆಯು, ಶ್ರೀಲಂಕಾ ಸರ್ಕಾರದ ಸಾವಯವ ಕೃಷಿ ಉಪಕ್ರಮವನ್ನು ಬೆಂಬಲಿಸುತ್ತದೆ. ಅಲ್ಲದೆ, ಶ್ರೀಲಂಕಾ ರೈತರಿಗೆ ನ್ಯಾನೋ ಸಾರಜನಕ ಲಭ್ಯತೆಯನ್ನು ತ್ವರಿತಗೊಳಿಸುತ್ತದೆ’ ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ದ್ವೀಪ ರಾಷ್ಟ್ರದಲ್ಲಿ ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಆರಂಭವಾಗುವ ಮನ್ಸೂನ್‌ ಆಥವಾ ಮಹಾ ಋತುವಿನಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಭತ್ತದ ಕೃಷಿಗೆ ಗೊಬ್ಬರ ಒದಗಿಸಬೇಕೆಂದು ಒತ್ತಾಯಿಸಿ ಜೂನ್‌ನಿಂದ ಸಾವಿರಾರು ರೈತರು ಪ್ರತಿದಿನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ADVERTISEMENT

ಪ್ರತಿ ವರ್ಷ ಸಾವಿರಾರು ಸಾವುಗಳಿಗೆ ಕಾರಣವಾಗುವ ನಿಗೂಢ ಮೂತ್ರಪಿಂಡ ಕಾಯಿಲೆ ಸೇರಿದಂತೆ ಕೃಷಿ ರಾಸಾಯನಿಕವು ತೀವ್ರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಕಾರಣ ನೀಡಿ ರಾಸಾಯನಿಕ ಗೊಬ್ಬರದ ಆಮದನ್ನು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಏಪ್ರಿಲ್‌ನಲ್ಲಿ ಹಠಾತ್ ನಿಷೇಧಿಸಿ ನಿರ್ಧಾರ ಕೈಗೊಂಡಿದ್ದರು.

ಆದರೆ, ಹಣಕಾಸು ಸಮಸ್ಯೆ, ವಿದೇಶಿ ವಿನಿಮಯ ಕುಸಿತದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ರಸಗೊಬ್ಬರ ನಿಷೇಧಕ್ಕೆ ನಿಜವಾದ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ರಸಗೊಬ್ಬರ ಆಮದಿಗಾಗಿ ಶ್ರೀಲಂಕಾ ವಾರ್ಷಿಕ 400 ಮಿಲಿಯನ್ ಡಾಲರ್‌ (₹2,980 ಕೋಟಿ) ಗಳನ್ನು ವ್ಯಯಿಸುತ್ತಿದೆ.

2019 ರಲ್ಲಿ ಈಸ್ಟರ್ ಹಬ್ಬದಂದು ಶ್ರೀಲಂಕಾದ ಚರ್ಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿ, ಕೋವಿಡ್ -19 ಕಾರಾಣದಿಂದಾಗಿ ಶ್ರೀಲಂಕಾ ತನ್ನ ಇತಿಹಾಸದಲ್ಲಿ ಅತಿದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಭಯೋತ್ಪಾದಕ ದಾಳಿ ಮತ್ತು ಸಾಂಕ್ರಾಮಿಕ ರೋಗವು ಪ್ರವಾಸೋದ್ಯಮದಂಥ ಪ್ರಮುಖ ವಿದೇಶಿ ಆದಾಯಕ್ಕೆ ಹೊಡೆತ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.