ADVERTISEMENT

ಬುಕಾ ನಗರದ ನಾಗರಿಕರ ಹತ್ಯೆಗಳನ್ನು ಖಂಡಿಸಿದ ಭಾರತ, ಸ್ವತಂತ್ರ ತನಿಖೆಗೆ ಕರೆ

ರಾಯಿಟರ್ಸ್
Published 6 ಏಪ್ರಿಲ್ 2022, 4:08 IST
Last Updated 6 ಏಪ್ರಿಲ್ 2022, 4:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉಕ್ರೇನ್‌ನ ಬುಕಾ ನಗರದಲ್ಲಿನ ನಾಗರಿಕರ ಹತ್ಯೆಗಳನ್ನು ಮಂಗಳವಾರ ಖಂಡಿಸಿರುವ ಭಾರತ, ಸ್ವತಂತ್ರ ತನಿಖೆಗೆ ಕರೆ ನೀಡಿದೆ. ಅಲ್ಲದೆ, ತನ್ನ ದೀರ್ಘಕಾಲದ ಪಾಲುದಾರ ರಷ್ಯಾದ ಉಕ್ರೇನ್ ಮೇಲಿನ ಆಕ್ರಮಣವನ್ನು ಟೀಕಿಸಲು ಈಗಾಗಲೇ ಭಾರತ ಸ್ಪಷ್ಟವಾಗಿ ನಿರಾಕರಿಸಿದೆ.

ಮಂಗಳವಾರ ಬುಕಾ ಪಟ್ಟಣದ ಚರ್ಚ್‌ನಲ್ಲಿ ನಡೆದಿರುವ ಸಾಮೂಹಿಕ ಸಮಾಧಿಯಲ್ಲಿ 150 ರಿಂದ 300 ಶವಗಳು ಇರಬಹುದು. ಅಲ್ಲಿ ರಷ್ಯಾದ ಪಡೆಗಳು ಉಕ್ರೇನ್‌ನ ನಾಗರಿಕರನ್ನು ಕೊಂದಿದೆ ಎಂದು ಉಕ್ರೇನ್ ಮಾನವ ಹಕ್ಕುಗಳ ತನಿಖಾಧಿಕಾರಿ ಆರೋಪಿಸಿದ್ದಾರೆ.

ಉಕ್ರೇನ್‌ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದನ್ನು ತಳ್ಳಿಹಾಕಿರುವ ರಷ್ಯಾ, ಬುಕಾದಲ್ಲಿ ಸತ್ತವರ ಚಿತ್ರಗಳು 'ನಕಲಿ'ಯಾಗಿದ್ದು, ತಮ್ಮ ವಿರುದ್ಧ ಅಪಪ್ರಚಾರ ಮಾಡಲು ಪ್ರದರ್ಶಿಸಲಾಗಿದೆ ಎಂದು ಹೇಳಿದೆ.

ADVERTISEMENT

'ಬುಕಾದಲ್ಲಿನ ನಾಗರಿಕ ಹತ್ಯೆಗಳ ಇತ್ತೀಚಿನ ವರದಿಗಳು ತುಂಬಾ ಕಳವಳಕಾರಿಯಾಗಿವೆ. ನಾವು ಈ ಹತ್ಯೆಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ ಮತ್ತು ಸ್ವತಂತ್ರ ತನಿಖೆಯ ಕರೆಯನ್ನು ಬೆಂಬಲಿಸುತ್ತೇವೆ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರು ಭದ್ರತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ದೂರವಾಣಿ ಸಂಭಾಷಣೆ ನಡೆಸಿದ ಸ್ವಲ್ಪ ಸಮಯದ ನಂತರ ತಿರುಮೂರ್ತಿ ಅವರು ತಮ್ಮ ಭಾಷಣ ಮಾಡಿದರು. ಫೆ. 24ರಂದು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸುವಂತೆ ಭಾರತವನ್ನು ಅಮೆರಿಕ ಪದೇ ಪದೆ ಒತ್ತಾಯಿಸುತ್ತಿದೆ.

ಮಿಲಿಟರಿ ಯುದ್ಧೋಪಕರಣಗಳಿಗಾಗಿ ಭಾರತವು ರಷ್ಯಾವನ್ನು ಹೆಚ್ಚು ಅವಲಂಬಿಸಿದೆ. ಹೀಗಾಗಿ ರಷ್ಯಾದ ನಡೆಯನ್ನು ನೇರವಾಗಿ ಖಂಡಿಸದ ಭಾರತ, ಉಕ್ರೇನ್‌ನಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಕರೆ ನೀಡಿದೆ. ಆದರೆ, ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳಿಂದ ಭಾರತ ದೂರವುಳಿದಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಲ್ಲದ ಭಾರತ, ಕಳೆದ ವಾರ ನವದೆಹಲಿಯಲ್ಲಿ ರಷ್ಯಾದ ವಿದೇಶಾಂಗ ಸಚಿವರಿಗೆ ಆತಿಥ್ಯ ನೀಡಿತು. ಈ ಸಂದರ್ಭದಲ್ಲಿ ಅವರು ವ್ಯಾಪಾರ ಸಂಬಂಧಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.