ಪೀಟರ್ ನವರೊ
ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತವನ್ನು ಟೀಕಿಸಿರುವ ಅಮೆರಿಕದ ಅಧಿಕಾರಿಗಳು, ಉಕ್ರೇನ್ ಯುದ್ಧಕ್ಕೆ ಭಾರತವೇ ಕಾರಣ ಎಂಬ ಹೇಳಿಕೆ ನೀಡಿರುವುದನ್ನು ಅಲ್ಲಿನ ಯಹೂದಿ ಸಂಘಟನೆ ಬಲವಾಗಿ ಖಂಡಿಸಿದೆ.
ತೈಲ ಖರೀದಿಸಲು ನೀಡುತ್ತಿರುವ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಕೆ ಮಾಡುತ್ತಿದೆ ಎಂದು ಅಮೆರಿಕದ ಕೆಲ ಅಧಿಕಾರಿಗಳು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಅವರ ‘ಮೋದಿ ಯುದ್ಧ’ ಹೇಳಿಕೆಯನ್ನು ಯಹೂದಿ ಸಂಘಟನೆ ತೀವ್ರವಾಗಿ ಟೀಕಿಸಿದೆ. ಜತೆಗೆ ನವದೆಹಲಿಯೊಂದಿಗೆ ಸಂಬಂಧ ಬಲಪಡಿಸಿಕೊಳ್ಳುವಂತೆಯೂ ಸಲಹೆ ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಘಟನೆ, ‘ಭಾರತ ವಿರುದ್ಧ ಅಮೆರಿಕದ ಅಧಿಕಾರಿಗಳ ಹೇಳಿಕೆ ಅನುಮಾನ ಮೂಡಿಸಿದ್ದು ಮಾತ್ರವಲ್ಲ, ಇಂಥ ಹೇಳಿಕೆಗಳು ಉಭಯ ರಾಷ್ಟ್ರಗಳ ಸಂಬಂಧದ ಮೇಲೆ ಆಳವಾದ ಪರಿಣಾಮ ಬೀರಲಿವೆ. ಅದರಲ್ಲೂ ನವಾರೊ ಅವರ ಹೇಳಿಕೆಯನ್ನು ಸಹಿಸಲಾಗದು’ ಎಂದಿದೆ.
‘ಇಂಧನ ಹಸಿವನ್ನು ಎದುರಿಸುತ್ತಿರುವ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ನಾವು ವಿಷಾಧಿಸುತ್ತೇವೆ. ಆದರೆ ಪುಟಿನ್ ನಡೆಸುತ್ತಿರುವ ಯುದ್ಧ ಅಪರಾಧಕ್ಕೆ ಭಾರತ ಕಾರಣವಲ್ಲ. ಭಾರತವು ಪ್ರಜಾಪ್ರಭುತ್ವದಲ್ಲಿ ಸೋದರ ರಾಷ್ಟ್ರವಿದ್ದಂತೆ ಹಾಗೂ ಅಮೆರಿಕದ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಹೀಗಾಗಿ ಈ ಸಂಬಂಧವನ್ನು ಉಳಿಸಿಕೊಳ್ಳಲು ಇದು ಸಕಾಲ’ ಎಂದು ಯಹೂದಿ ಸಂಘ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದಾಗುವ ವಸ್ತುಗಳಿಗೆ ಶೇ 50ರಷ್ಟು ಸುಂಕ ಹೇರಿದ ನಂತರ ಅಲ್ಲಿನ ಶ್ವೇತ ಭವನದ ಅಧಿಕಾರಿ ನವರೊ ಅವರು ಕಳೆದ ಕೆಲ ದಿನಗಳಿಂದ ಭಾರತದ ಮೇಲೆ ನಿರಂತರ ವಾಗ್ದಾಳಿ ನಡೆಸಿದ್ದಾರೆ. ರಷ್ಯಾದಿಂದ ತೈಲ ಖರೀದಿಯನ್ನು ನಿರಂತರವಾಗಿ ವಿರೋಧಿಸಿದ್ದರು.
ಅಮೆರಿಕದ ಹೇಳಿಕೆಗಳಿಗೆ ತಿರುಗೇಟು ನೀಡಿದ ಭಾರತ, ‘ಅಮರಿಕದ ನಿರ್ಧಾರವು ಅತಾರ್ಕಿಕ ಮತ್ತು ನ್ಯಾಯಸಮ್ಮತವಲ್ಲ’ ಎಂದಿತ್ತು.
‘ಇತರ ಪ್ರಮುಖ ಆರ್ಥಿಕ ರಾಷ್ಟ್ರಗಳಂತೆ, ಭಾರತವೂ ತನ್ನ ದೇಶದ ಹಿತ ಕಾಯ್ದುಕೊಳ್ಳಲು ಮತ್ತು ಆರ್ಥಿಕ ಭದ್ರತೆಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದೂ ಸ್ಪಷ್ಟಪಡಿಸಿತ್ತು.
ಇದರ ನಡುವೆ ಅಮೆರಿಕದ ಫೆಡರಲ್ ನ್ಯಾಯಾಲವು ಟ್ರಂಪ್ ಸುಂಕವನ್ನು ಕಾನೂನು ಬಾಹಿರ ಎಂದಿದೆ. ಇದರ ಬೆನ್ನಲ್ಲೇ ಡೆಮಾಕ್ರೆಟ್ಸ್ ಹೌಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯು, ಸುಂಕ ಹೇರುವ ಮೂಲಕ ದೇಶದಲ್ಲಿ ಉಂಟಾಗಿರುವ ಅಘೋಷಿತ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಲು ನಿರ್ಣಯ ಮಂಡಿಸುವಂತೆ ಪ್ರತಿನಿಧಿ ಗ್ರೆಗೊರಿ ಮೀಕ್ಸ್ ಅವರಿಗೆ ಹೇಳಿದೆ. ಜತೆಗೆ ಟ್ರಂಪ್ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಸ್ಪೀಕರ್‌ಗೆ ತಾಕೀತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.