
ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ವಾಷಿಂಗ್ಟನ್: ‘ರಷ್ಯಾದಿಂದ ಇನ್ನು ಮುಂದೆ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
‘ಉಕ್ರೇನ್‌ನ ಮೇಲೆ ರಷ್ಯಾ ನಡೆಸುತ್ತಿರುವ ಸಂಘರ್ಷ ಕೊನೆಗೊಳಿಸುವ ದಿಸೆಯಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ’ ಎಂದೂ ಅವರು ಬಣ್ಣಿಸಿದ್ದಾರೆ.
ಅಮೆರಿಕದ ನಿರಂತರ ಒತ್ತಡ, ಸುಂಕ ಹೆಚ್ಚಳದ ಬೆದರಿಕೆ ಹೊರತಾಗಿಯೂ ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಭಾರತ ಮುಂದುವರಿಸಿತ್ತು. ಇದರಿಂದ, ಭಾರತ ಹಾಗೂ ಅಮೆರಿಕ ನಡುವಂ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು.
ಓವಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಟ್ರಂಪ್, ‘ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವುದಕ್ಕೆ ಅಮೆರಿಕವು ಸಂತಸಗೊಂಡಿಲ್ಲ. ಇಂತಹ ಖರೀದಿಯಿಂದಲೇ ವ್ಲಾದಿಮಿರ್ ಪುಟಿನ್ ಅವರಿಗೆ ಯುದ್ಧ ಮಾಡಲು ನೆರವು ದೊರೆತಿದೆ’ ಎಂದಿದ್ದಾರೆ.
‘ಅವರು (ಮೋದಿ) ನನ್ನ ಸ್ನೇಹಿತ. ನಮ್ಮಿಬ್ಬರ ನಡುವೆ ಅತ್ಯುತ್ತಮವಾದ ಸ್ನೇಹ ಸಂಬಂಧವಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದು ನಮಗೆ ಸಂತಸ ತಂದಿಲ್ಲ. ಈ ಹಣ ಬಳಸಿಕೊಂಡು ರಷ್ಯಾವು ಯುದ್ಧದಲ್ಲಿ ತೊಡಗಿಕೊಂಡಿದೆ. ಇದುವರೆಗೂ 15 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.
‘ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ. ಚೀನಾ ಕೂಡ ಅದೇ ರೀತಿ ಮಾಡಬೇಕಿದೆ’ ಎಂದು ಹೇಳಿದ್ದಾರೆ.
‘ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ರಾಷ್ಟ್ರಗಳಲ್ಲಿ ಚೀನಾವು ಮೊದಲ ಸ್ಥಾನದಲ್ಲಿದ್ದು, ಭಾರತವು ನಂತರದ ಸ್ಥಾನದಲ್ಲಿದೆ’ ಎಂದು ಇಂಧನ ಹಾಗೂ ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರ್‌ಇಎ) ತಿಳಿಸಿದೆ.
‘ಕಚ್ಚಾತೈಲ ಖರೀದಿಯನ್ನು ತಕ್ಷಣವೇ ನಿಲ್ಲಿಸುವುದಿಲ್ಲ, ಈ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕೆ ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಿದ್ದು, ಆದಷ್ಟು ಬೇಗ ಜಾರಿಯಾಗಲಿದೆ’ ಎಂದು ಟ್ರಂಪ್ ವಿವರಿಸಿದರು.
ಇಂಧನ ಮಾರುಕಟ್ಟೆಯ ಅಸ್ಥಿರ ಸನ್ನಿವೇಶದಲ್ಲಿ ಭಾರತದ ಗ್ರಾಹಕರ ಹಿತಾಸಕ್ತಿ ಕಾಪಾಡುವುದೇ ನಮ್ಮ ಆದ್ಯತೆಯಾಗಿದೆ.– ರಣಧೀರ ಜೈಸ್ವಾಲ್, ಭಾರತದ ವಿದೇಶಾಂಗ ಇಲಾಖೆ ವಕ್ತಾರ
ರಷ್ಯಾ ಸೇರಿದಂತೆ ವಿಶ್ವದ ಎಲ್ಲ ದೇಶಗಳ ಜೊತೆಗೆ ಚೀನಾವು ವಾಣಿಜ್ಯ ವ್ಯವಹಾರ ಹಾಗೂ ಇಂಧನ ಸಹಕಾರ ಹೊಂದಿದೆ. ದೇಶದ ಹಿತಾಸಕ್ತಿಗೆ ಧಕ್ಕೆಯಾದರೆ ನಾವು ದೃಢ ಕ್ರಮಗಳನ್ನು ಕೈಗೊಳ್ಳುತ್ತೇವೆ.– ಲಿನ್ ಜಿಯಾನ್, ಚೀನಾದ ವಿದೇಶಾಂಗ ಇಲಾಖೆ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.