ಭಾರತ ಮತ್ತು ಪಾಕಿಸ್ತಾನ
ಐಸ್ಟೋಕ್ ಸಂಗ್ರಹ ಚಿತ್ರ
ಇಸ್ಲಾಮಾಬಾದ್ / ನವದೆಹಲಿ: ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಸದೆಬಡಿಯಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧದ ಸ್ವರೂಪದ ಸಂಘರ್ಷ ಕೊನೆಗೊಳಿಸಲು ‘ಕದನ ವಿರಾಮ’ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಭಾರತದೊಂದಿಗೆ ಮಾತುಕತೆಗೆ ನಾವು ಸಿದ್ಧವಿದ್ದೇವೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ತಿಳಿಸಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಮುನೀರ್ ಈ ಕುರಿತು ಘೋಷಿಸಿದ್ದಾರೆ.
ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ನಡುವೆಯೇ ಮಾತುಕತೆಗಳು ಆಗಬೇಕು. ಹೊರತುಪಡಿಸಿ ಬೇರೆಯವರೊಂದಿಗೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ದಾಳಿ ನಡೆಸಿರುವುದಾಗಿ ಭಾರತ ಮೇ 7ರಂದು ಪಾಕಿಸ್ತಾನದ ಡಿಜಿಎಂಒಗೆ ತಿಳಿಸಿತ್ತು. ಆದರೆ, ಈ ವಿಚಾರವಾಗಿ ಡಿಜಿಎಂಒ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಭಾರತೀಯ ಸೇನೆಯು ಪಾಕ್‌ನ ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಬೆನ್ನಲ್ಲೇ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದಲೂ ಭಾರತ–ಪಾಕ್ ಗಡಿ ಪ್ರದೇಶದಲ್ಲಿ ನಡೆದಿದ್ದ ಡ್ರೋನ್, ಕ್ಷಿಪಣಿಗಳ ಹಾರಾಟದ ಬಿರುಸು ಡಿಜಿಎಂಒಗಳ ಮಾತುಕತೆಯ ಬೆನ್ನಹಿಂದೆಯೇ ಕೊನೆಗೊಂಡಿದೆ.
ನಿರಂತರವಾಗಿ ದಾಳಿ ನಡೆಸಿ ಪ್ರಚೋದನೆ ನೀಡಿದ ಪಾಕಿಸ್ತಾನಕ್ಕೆ ಭಾರತೀಯ ಸಶಸ್ತ್ರ ಪಡೆಯು ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಪಾಕಿಸ್ತಾನದ ಎಂಟು ಮಿಲಿಟರಿ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಭಾರಿ ಹಾನಿ ಉಂಟು ಮಾಡಿದೆ. ಅದರ ಬೆನ್ನಲ್ಲೇ, ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರಿಗೆ ಮಧ್ಯಾಹ್ನ 3:30ಕ್ಕೆ ಕರೆ ಮಾಡಿ ಮಾತುಕತೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.