ADVERTISEMENT

ಫಿಲಿಪ್ಪೀನ್ಸ್‌ ಜೊತೆ ಭಾರತ ದ್ವಿಪಕ್ಷೀಯ ಸಭೆ

ಪಿಟಿಐ
Published 22 ಸೆಪ್ಟೆಂಬರ್ 2025, 16:00 IST
Last Updated 22 ಸೆಪ್ಟೆಂಬರ್ 2025, 16:00 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ನ್ಯೂಯಾರ್ಕ್‌: ದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು ಫಿಲಿಪ್ಪೀನ್ಸ್‌ ವಿದೇಶಾಂಗ ಕಾರ್ಯದರ್ಶಿ ಟೆಸ್‌ ಲಜಾರೊ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಹಕಾರದ ಕುರಿತು ಮಾತುಕತೆ ನಡೆಸಿದರು. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಉನ್ನತ ಮಟ್ಟದ ಸಭೆಯಲ್ಲಿ (ಯುಎನ್‌ಜಿಎ) ಭಾಗಿಯಾಗಲು ಜೈಶಂಕರ್‌ ಅವರು ಅಮೆರಿಕಕ್ಕೆ ಭಾನುವಾರ ತೆರಳಿದರು. 

‘ಟೆಸ್‌ ಲಜಾರೊ ಅವರನ್ನು ಭೇಟಿಯಾಗಿ ಸಂತೋಷವಾಯಿತು. ವಿಶ್ವಸಂಸ್ಥೆ ಮತ್ತು ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕಾರದ ಕುರಿತು ನಾವು ಚರ್ಚಿಸಿದೆವು’ ಎಂದು ಜೈಶಂಕರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ADVERTISEMENT

‘ರಾಜಕೀಯ, ಭದ್ರತೆ, ಸಾಗರ ಸಂಪರ್ಕ ಹಾಗೂ ಇತರ ಕ್ಷೇತ್ರಗಳಲ್ಲಿನ ಸಹಕಾರವನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಪಾಲುದಾರಿಕೆ ವಿಷಯದಲ್ಲಿ ಎರಡೂ ದೇಶಗಳು ಎಂದಿನಂತೆ ಬದ್ಧವಾಗಿವೆ’ ಎಂದು ಟೆಸ್‌ ಲಜಾರೊ ಹೇಳಿದರು. 

ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದ ಫಿಲಿಪ್ಪೀನ್ಸ್‌ ಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೋಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಭದ್ರತೆ, ವ್ಯಾಪಾರ, ಬಂಡವಾಳ, ಕೃಷಿ, ಪ್ರವಾಸೋದ್ಯಮ ಹಾಗೂ ಔಷಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದ್ದರು. 

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ ಸಾಧ್ಯತೆ 
ಜೈಶಂಕರ್‌ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.   ವಿದೇಶಾಂಗ ಇಲಾಖೆಯು ಹೊರಡಿಸಿದ ದೈನಂದಿನ ವೇಳಾಪಟ್ಟಿಯ ಪ್ರಕಾರ ಜೈಶಂಕರ್‌ ಅವರು ಮಾರ್ಕೊ ರುಬಿಯೊ ಅವರನ್ನು ನ್ಯೂಯಾರ್ಕ್‌ನಲ್ಲಿ ಸೋಮವಾರ ಮುಂಜಾನೆ ಭೇಟಿಯಾಗಲಿದ್ದಾರೆ.  ವಾಷಿಂಗ್ಟನ್‌ ಡಿಸಿಯಲ್ಲಿ ಜುಲೈನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಕೊನೆಯ ಬಾರಿ ಜೈಶಂಕರ್‌ ಹಾಗೂ ಮಾರ್ಕೊ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.