ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್
ಕೃಪೆ: ರಾಯಿಟರ್ಸ್
ತಿಯಾನ್‌ಜಿನ್ (ಚೀನಾ): ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವ ಗಡಿ ವಿವಾದವನ್ನು ‘ಮುಕ್ತ, ನ್ಯಾಯಯುತ ಮತ್ತು ಪರಸ್ಪರರಿಗೆ ಒಪ್ಪಿತವಾಗಬಹುದಾದ ಮಾರ್ಗ’ದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬದ್ಧತೆ ವ್ಯಕ್ತಪಡಿಸಿದರು.
ತಿಯಾನ್‌ಜಿನ್‌ನಲ್ಲಿ ಭಾನುವಾರ ಆರಂಭವಾದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆ ವೇಳೆ ಮೋದಿ ಹಾಗೂ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಜಾಗತಿಕ ವ್ಯಾಪಾರದಲ್ಲಿ ಸ್ಥಿರತೆ ತರುವ ದಿಸೆಯಲ್ಲಿ ಜತೆಯಾಗಿ ಕೆಲಸ ಮಾಡುವ ಪ್ರತಿಜ್ಞೆಯನ್ನೂ ಉಭಯ ನಾಯಕರು ಕೈಗೊಂಡರು. ಅಭಿವೃದ್ಧಿಯ ವಿಚಾರದಲ್ಲಿ ಎರಡೂ ದೇಶಗಳು ಪಾಲುದಾರರೇ ಹೊರತು ಪ್ರತಿಸ್ಪರ್ಧಿಗಳಲ್ಲ; ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಎಂಬುದನ್ನು ಒಪ್ಪಿಕೊಂಡರು.
ಜಾಗತಿಕ ಅರ್ಥ ವ್ಯವಸ್ಥೆಗೆ ಸ್ಥಿರತೆ ತರಲು ಉಭಯ ದೇಶಗಳ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸಬೇಕು ಎಂಬ ವಿಚಾರದಲ್ಲಿ ಇಬ್ಬರೂ ನಾಯಕರು ಸಹಮತ ವ್ಯಕ್ತಪಡಿಸಿದರು. ಅಮೆರಿಕದ ಸುಂಕ ಹೇರಿಕೆಯು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವ ಸಮಯದಲ್ಲಿ ನಡೆದಿರುವ ಈ ಮಾತುಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
‘ಭಾರತ ಮತ್ತು ಚೀನಾ ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿಯದೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಉಭಯ ದೇಶಗಳ ಸಂಬಂಧವನ್ನು ಮೂರನೇ ದೇಶದ ದೃಷ್ಟಿಯಲ್ಲಿ ನೋಡ ಬಾರದು’ ಎಂದು ಮಾತುಕತೆ ವೇಳೆ ಪ್ರಧಾನಿ ಹೇಳಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಪ್ರಕಟಣೆ ತಿಳಿಸಿದೆ.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ಮಹತ್ವವನ್ನು ಪ್ರಧಾನಿ ಅವರು ಒತ್ತಿ ಹೇಳಿದರು. ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಿದ್ದ ಸೇನಾಪಡೆಗಳನ್ನು ಕಳೆದ ವರ್ಷ ವಾಪಸ್ ಕರೆಸಿಕೊಂಡದ್ದು ಮತ್ತು ಆ ಬಳಿಕ ಗಡಿಯಲ್ಲಿ ಶಾಂತಿ
ನೆಲಸಿರುವುದಕ್ಕೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್‌ನಲ್ಲಿ ನಡೆದ ಮಾತುಕತೆಯ ನಂತರ ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆ ಕಂಡುಬಂದಿರುವುದಕ್ಕೆ ಇಬ್ಬರೂ ಸಂತಸ ವ್ಯಕ್ತಪಡಿಸಿದರು.
ಮೋದಿ ಅವರು ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡಿದ್ದಾರೆ. ಗಾಲ್ವನ್ ಕಣಿವೆಯಲ್ಲಿನ ಸಂಘರ್ಷದ ಬಳಿಕ ಹದಗೆಟ್ಟಿದ್ದ ಭಾರತ–ಚೀನಾ ಸಂಬಂಧ ದಲ್ಲಿ ಸುಧಾರಣೆ ತರುವ ಪ್ರಕ್ರಿಯೆ ಮುಂದುವರಿಸುವುದು ಮೋದಿ-ಷಿ ಮಾತುಕತೆಯ ಮುಖ್ಯ ಆಶಯವಾಗಿತ್ತು ಎಂದು ತಿಳಿದು ಬಂದಿದೆ.
ಜಿನ್‌ಪಿಂಗ್‌ಗೆ ಆಹ್ವಾನ: ಭಾರತದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರು ಚೀನಾ ಅಧ್ಯಕ್ಷರನ್ನು ಆಹ್ವಾನಿಸಿದರು.
‘ಆಹ್ವಾನ ನೀಡಿದ್ದಕ್ಕೆ ಷಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಚೀನಾ ತನ್ನ ಬೆಂಬಲ ಸೂಚಿಸಿದೆ’ ಎಂದು ಎಂಇಎ ಪ್ರಕಟಣೆ ತಿಳಿಸಿದೆ.
ಭಾರತದಿಂದ ಆಮದು ಮಾಡಿಕೊಳ್ಳುತ್ತಿ ರುವ ಸರಕುಗಳ ಮೇಲೆ ಅಮೆರಿಕವು ಶೇಕಡ 50ರಷ್ಟು ಸುಂಕ ವಿಧಿಸಿದ ಐದು ದಿನಗಳ ಬಳಿಕ ಮೋದಿ– ಜಿನ್‌ಪಿಂಗ್ ಮಾತುಕತೆ ನಡೆದಿದೆ. ಭಾರತವು ರಷ್ಯಾದಿಂದ ತೈಲ
ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ಅಮೆರಿಕವು ಸುಂಕ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ವಿರುದ್ಧ ಷಿ ಮತ್ತು ಮೋದಿ ಅವರು ಒಗ್ಗಟ್ಟಿನ ಹೋರಾಟ ನಡೆಸಲು ನೋಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತವು ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮ ವಿಚಾರಗಳ ಆಧಾರದ ಮೇಲೆ ಚೀನಾದೊಂದಿಗಿನ ಬಾಂಧವ್ಯ ಮುಂದುವರಿಸಲು ಬದ್ಧವಾಗಿದೆ
ಭಾರತ–ಚೀನಾ ನಡುವಣ ಸಹಕಾರವು ಎರಡೂ ದೇಶಗಳ 280 ಕೋಟಿ ಜನರ ಹಿತಾಸಕ್ತಿಗೆ ಸಂಬಂಧಿಸಿದ್ದು
ಪೂರ್ವ ಲಡಾಖ್‌ನಲ್ಲಿ ನಿಯೋಜಿಸಿದ್ದ ಸೇನೆಯನ್ನು ಕಳೆದ ವರ್ಷ ಉಭಯ ದೇಶಗಳು ವಾಪಸ್ ಕರೆಸಿ ಕೊಂಡಿರುವುದು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯ ವಾತಾವರಣ ಸೃಷ್ಟಿಸಿದೆ
ಕಳೆದ ವರ್ಷ ಕಜಾನ್‌ನಲ್ಲಿ ನಡೆದ ಚರ್ಚೆ ನಮ್ಮ ಸಂಬಂಧ ಸಕಾರಾತ್ಮಕ ಹಾದಿಯಲ್ಲಿ ಮುನ್ನಡೆಯಲು ನೆರವಾಗಿದೆ
ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭವಾಗಿದೆ. ಉಭಯ ದೇಶಗಳ ನಡುವೆ ನೇರ ವಿಮಾನ ಸಂಚಾರ ಕೂಡಾ ಪುನರಾರಂಭಿಸಲಾಗುತ್ತದೆ
ಪರಸ್ಪರ ‘ಸ್ನೇಹಿತ’ರಾಗಿರುವುದೇ ಭಾರತ ಹಾಗೂ ಚೀನಾದ ಮುಂದಿರುವ ಒಳ್ಳೆಯ ಆಯ್ಕೆ
ಗಡಿಯಲ್ಲಿ ಶಾಂತಿ ಸ್ಥಾಪನೆ ಖಚಿತಪಡಿಸಿಕೊಳ್ಳಲು ಎರಡೂ ದೇಶಗಳು ಜತೆಯಾಗಿ ಕೆಲಸ
ಮಾಡಬೇಕು
ಭಾರತ–ಚೀನಾ ಸಂಬಂಧವನ್ನು ಗಡಿ ವಿವಾದದ ಆಧಾರದಲ್ಲಿ ವ್ಯಾಖ್ಯಾನಿಸಲು ಅವಕಾಶ ನೀಡಬಾರದು
ಎರಡೂ ದೇಶಗಳು ಪರಸ್ಪರರ ಯಶಸ್ಸಿನಲ್ಲಿ ಪಾಲುದಾರರಾಗಬೇಕು. ಡ್ರ್ಯಾಗನ್ (ಚೀನಾ) ಮತ್ತು ಆನೆ (ಭಾರತ) ಜತೆಯಾಗಿ ನೃತ್ಯ ಮಾಡುವಂತಾಗಬೇಕು
ಅಭಿವೃದ್ಧಿ ಹಾದಿಯಲ್ಲಿ ಪರಸ್ಪರ ಜತೆಗಾರರಾಗಬೇಕೇ ಹೊರತು, ಬೆದರಿಕೆಯಾಗಿ ಪರಿಣಮಿಸಬಾರದು
ಬಹುಪಕ್ಷೀಯತೆ ಎತ್ತಿಹಿಡಿಯುವ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಜಾಪ್ರಭುತ್ವದ
ಮೌಲ್ಯಗಳನ್ನು ತರುವ ನಮ್ಮ ಐತಿಹಾಸಿಕ ಜವಾಬ್ದಾರಿಯನ್ನು ನಿರ್ವಹಿಸಲು ಒಟ್ಟಾಗಿ ಕೆಲಸ ಮಾಡಬೇಕು
ಎಸ್‌ಸಿಒಗೆ ಚೀನಾ ಅಧ್ಯಕ್ಷತೆ ಮತ್ತು ಟಿಯಾನ್ ಜಿನ್ ಶೃಂಗಸಭೆಯನ್ನು ಬೆಂಬಲಿಸುವುದಾಗಿ ಹೇಳಿರುವ ಮೋದಿ, 2026ರಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಲಿರುವ ಬ್ರಿಕ್ಸ್ ಶೃಂಗಸಭೆಗೆ ಷಿ ಅವರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿಗೆ ಧನ್ಯವಾದ ಹೇಳಿರುವ ಷಿ, ಬ್ರಿಕ್ಸ್‌ಗೆ ಭಾರತದ ಅಧ್ಯಕ್ಷತೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.