ADVERTISEMENT

ಪಾಕಿಸ್ತಾನದಿಂದ ಕೆಟ್ಟ ಸುಳ್ಳಿನ ಸರಣಿ: ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

ಪಿಟಿಐ
Published 26 ಸೆಪ್ಟೆಂಬರ್ 2020, 2:50 IST
Last Updated 26 ಸೆಪ್ಟೆಂಬರ್ 2020, 2:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಪಾಕಿಸ್ತಾನವು ಮತ್ತೊಮ್ಮೆ ಕೆಟ್ಟ ಸುಳ್ಳಿನ ಕತೆ ಹೆಣೆದಿದ್ದು ವೈಯಕ್ತಿಕ ನಿಂದನೆ ಹಾಗೂ ಆಕ್ರಮಣಶೀಲತೆ ಪ್ರದರ್ಶಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿದೆ.

ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಸಂದರ್ಭದಲ್ಲಿ ಜಮ್ಮು–ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ನೀಡಿರುವ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿದೆ. ಜಮ್ಮು–ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದೂ ಪುನರುಚ್ಚರಿಸಿದೆ.

‘ಪಾಕಿಸ್ತಾನದ ಪ್ರಧಾನಿ ಹೇಳಿಕೆಯು ಕೀಳುಮಟ್ಟದ್ದಾಗಿದ್ದು ಕೆಟ್ಟ ಸುಳ್ಳುಗಳು, ವೈಯಕ್ತಿಕ ನಿಂದನೆ, ಆಕ್ರಮಣಶೀಲತೆಯಿಂದ ಕೂಡಿವೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಗಡಿಯಾಚೆಗಿನ ಭಯೋತ್ಪಾದನೆ ವಿಷಯವನ್ನು ಮುಚ್ಚಿಡಲಾಗಿದೆ. ಇದಕ್ಕೆ ತಕ್ಕ ತಿರುಗೇಟು ನೀಡುವ ಹಕ್ಕಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದ ಇಮ್ರಾನ್ ಖಾನ್, ಜಮ್ಮು–ಕಾಶ್ಮೀರ ವಿಚಾರವೂ ಸೇರಿದಂತೆ ಭಾರತದ ಆಂತರಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದರು.

ಭಾರತದ ವಿಚಾರಗಳನ್ನು ಖಾನ್ ಪ್ರಸ್ತಾಪಿಸುತ್ತಿರುವುದನ್ನು ಪ್ರತಿಭಟಿಸಿ ವಿಶ್ವಸಂಸ್ಥೆಯಲ್ಲಿ ಭಾರತದ ''ಪರ್ಮನೆಂಟ್ ಮಿಷನ್‌''ನ ಕಾರ್ಯದರ್ಶಿ ಮಿಜಿಟೊ ವಿನಿಟೊ ಸಭಾತ್ಯಾಗ ಮಾಡಿದ್ದರು.

ಜಮ್ಮು–ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯದ ಗಮನ ಸೆಳೆಯುವ ಪಾಕಿಸ್ತಾನದ ಯತ್ನವನ್ನು ಭಾರತ ನಿರಂತರವಾಗಿ ವಿಫಲಗೊಳಿಸುತ್ತಲೇ ಬಂದಿದೆ. ಆದರೂ ಪಾಕಿಸ್ತಾನವು ಮತ್ತೆ ಮತ್ತೆ ಆ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.