ADVERTISEMENT

ಅಲ್ಪಸಂಖ್ಯಾತರ ವಿಚಾರ ಪ್ರಸ್ತಾಪ: ಸ್ವಿಟ್ಜರ್‌ಲ್ಯಾಂಡ್ ನಡೆಗೆ ಭಾರತ ತೀವ್ರ ಆಕ್ಷೇಪ

ಪಿಟಿಐ
Published 11 ಸೆಪ್ಟೆಂಬರ್ 2025, 7:51 IST
Last Updated 11 ಸೆಪ್ಟೆಂಬರ್ 2025, 7:51 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ/ಜಿನೀವಾ: ಭಾರತದಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಸ್ವಿಟ್ಜರ್‌ಲ್ಯಾಂಡ್‌ ‘ಅಚ್ಚರಿ’, ‘ಅಪ್ರಜ್ಞಾಪೂರ್ವಕ’ವಾದ ಹೇಳಿಕೆಗಳನ್ನು ನೀಡಿದೆ. ಅಲ್ಪಸಂಖ್ಯಾತರ ಕುರಿತಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಅದು ಇಲ್ಲಸಲ್ಲದ್ದನ್ನು ಪ್ರಸ್ತಾಪಿಸಿರುವುದು ವಿಷಾದನೀಯ ಎಂದು ಭಾರತ ಗುರುವಾರ ಟೀಕಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ ಅಲ್ಪಸಂಖ್ಯಾತರ ವಿಷಯ ಪ್ರಸ್ತಾಪಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, ‘ಸ್ವಿಟ್ಜರ್‌ಲ್ಯಾಂಡ್‌ ಅಪ್ರಜ್ಞಾಪೂರ್ವಕವಾದ ಹೇಳಿಕೆಗಳನ್ನು ನೀಡುವ ಬದಲು ಜನಾಂಗೀಯತೆ, ತಾರತಮ್ಯದಂತಹ ತನ್ನದೇ ಆದ ಸವಾಲುಗಳ ಬಗ್ಗೆ ಗಮನಹರಿಸಬೇಕು’ ಎಂದು ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್‌ನ ಕೌನ್ಸೆಲರ್‌ ಆದ ಕ್ಷಿತಿಜ್‌ ತ್ಯಾಗಿ ಮಾತನಾಡಿ, ‘ಆಪ್ತ ಸ್ನೇಹಿತ ಮತ್ತು ಪಾಲುದಾರ ದೇಶವಾದ ಸ್ವಿಟ್ಜರ್‌ಲ್ಯಾಂಡ್‌ ನೀಡಿರುವ ಆಶ್ಚರ್ಯಕರ, ಅಪ್ರಜ್ಞಾಪೂರ್ವಕ ಹೇಳಿಕೆಗಳಿಗೆ ನಾವು ಪ್ರತಿಕ್ರಿಯಿಸಲು ಬಯಸುತ್ತೇವೆ. ಯುಎನ್‌ಎಚ್‌ಆರ್‌ಸಿಯ ಅಧ್ಯಕ್ಷತೆ ವಹಿಸಿರುವ ಸ್ವಿಟ್ಜರ್‌ಲ್ಯಾಂಡ್‌, ಭಾರತದ ಅಲ್ಪಸಂಖ್ಯಾತರ ಬಗ್ಗೆ ಸುಳ್ಳು ಮತ್ತು ಭಾರತದ ವಾಸ್ತವಕ್ಕೆ ವಿರುದ್ಧದ ನಿರೂಪಣೆಗಳೊಂದಿಗೆ ಮಂಡಳಿಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸುವುದು ಮುಖ್ಯವಾಗಿದೆ’ ಎಂದು ಕಟುವಾಗಿ ಟೀಕಿಸಿದ್ದಾರೆ.

ADVERTISEMENT

‘ಸ್ವಿಟ್ಜರ್‌ಲ್ಯಾಂಡ್‌ ಅಪ್ರಜ್ಞಾಪೂರ್ವಕವಾದ ಹೇಳಿಕೆಗಳನ್ನು ನೀಡುವ ಬದಲು ಜನಾಂಗೀಯತೆ, ತಾರತಮ್ಯದಂತಹ ತನ್ನದೇ ಆದ ಸವಾಲುಗಳ ಬಗ್ಗೆ ಗಮನಹರಿಸಬೇಕು. ವಿಶ್ವದ ಅತಿದೊಡ್ಡ, ಅತ್ಯಂತ ವೈವಿಧ್ಯಮಯ ಪ್ರಜಾಪ್ರಭುತ್ವವನ್ನು ಒಳಗೊಂಡಿರುವ ಭಾರತವು ಸ್ವಿಟ್ಜರ್‌ಲ್ಯಾಂಡ್‌ಗೆ ಸಹಾಯ ಮಾಡಲು ಸಿದ್ಧವಾಗಿದೆ’ ಎಂದು ತ್ಯಾಗಿ ಕುಟುಕಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ ಪ್ರತಿನಿಧಿಯೊಬ್ಬರು ಮಾತನಾಡಿ, ‘ಭಾರತದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಲು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಹಕ್ಕುಗಳನ್ನು ಎತ್ತಿಹಿಡಿಯಬೇಕೆಂದು ಅಲ್ಲಿನ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.