ADVERTISEMENT

ಅಮೆರಿಕದೊಂದಿಗೆ ಭಾರತದ ಇಂಧನ ವ್ಯಾಪಾರ ಹೆಚ್ಚಳ ಸಾಧ್ಯತೆ: ವಾಣಿಜ್ಯ ಸಚಿವ ಪಿಯೂಷ್

ಪಿಟಿಐ
Published 24 ಸೆಪ್ಟೆಂಬರ್ 2025, 6:49 IST
Last Updated 24 ಸೆಪ್ಟೆಂಬರ್ 2025, 6:49 IST
<div class="paragraphs"><p>ಪಿಯೂಷ್ ಗೋಯಲ್</p></div>

ಪಿಯೂಷ್ ಗೋಯಲ್

   

ನ್ಯೂಯಾರ್ಕ್: ‘ಅಮೆರಿಕದೊಂದಿಗೆ ಇಂಧನ ವಹಿವಾಟನ್ನು ಮುಂದಿನ ಒಂದು ವರ್ಷದಲ್ಲಿ ಭಾರತ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಆ ಮೂಲಕ ಭಾರತದ ಇಂಧನ ಭದ್ರತೆಯ ಗುರಿ ತಲುಪಲು ಅಮೆರಿಕದ ಪಾಲುದಾರಿಕೆ ಮಹತ್ವದ್ದಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಇಂಧನ ಭದ್ರತೆಯ ವಿಷಯದಲ್ಲಿ ಜಗತ್ತಿನ ಪ್ರತಿಯೊಬ್ಬರೂ ಜತೆಗೂಡಿ ಕೆಲಸ ಮಾಡಬೇಕೆಂಬುದು ಸ್ಪಷ್ಟ. ಇಂಧನ ಕ್ಷೇತ್ರದಲ್ಲಿ ಭಾರತ ಅತಿದೊಡ್ಡ ಪಾಲುದಾರ ರಾಷ್ಟ್ರವಾಗಿದೆ. ಅಮೆರಿಕವನ್ನೂ ಒಳಗೊಂಡಂತೆ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ’ ಎಂದಿದ್ದಾರೆ.

ADVERTISEMENT

‘ಬದಲಾದ ಪರಿಸ್ಥಿತಿಯಲ್ಲಿ ಜಾಗತಿಕ ಭೂಪ್ರದೇಶದಲ್ಲಿ ಇಂಧನ ಭದ್ರತೆ: ಗಡಿಗಳಲ್ಲಿ ಸ್ಥಿತಿಸ್ಥಾಪಕ ಇಂಧನ ಮಾರುಕಟ್ಟೆಗಳ ನಿರ್ಮಾಣ’ ಎಂಬ ವಿಷಯ ಕುರಿತು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌, ಅಮೆರಿಕ–ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆ ಮತ್ತು ಭಾರತದ ಪ್ರಮುಖ ಡಿಕಾರ್ಬನೈಸೇಷನ್‌ ಸಲಹೆಗಾರರು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಂದಿನ ಕೆಲ ವರ್ಷಗಳಲ್ಲಿ ಇಂಧನ ಉತ್ಪನ್ನಗಳ ಕ್ಷೇತ್ರದಲ್ಲಿ ಅಮೆರಿಕದೊಂದಿಗೆ ನಮ್ಮ ವ್ಯಾಪಾರ ಹೆಚ್ಚಳವಾಗುವ ನಿರೀಕ್ಷೆಯಿದೆ. ಅಮೆರಿಕವು ಭಾರತದ ಆಪ್ತ ರಾಷ್ಟ್ರ ಮತ್ತು ನೈಸರ್ಗಿಕ ಪಾಲುದಾರರಾಗಿರುವುದರಿಂದ, ನಮ್ಮ ಇಂಧನ ಭದ್ರತಾ ಗುರಿಗಳು ಅಮೆರಿಕದ ಒಳಗೊಳ್ಳುವಿಕೆಯನ್ನು ಅವಲಂಬಿಸಿದೆ. ಇದರಿಂದ ಬೆಲೆ ಸ್ಥಿರತೆಯ ಜತೆಗೆ ಅಪರಿಮಿತ ಸಾಧ್ಯತೆಗಳನ್ನು ತಲುಪಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಶಕ್ತಿ ಕ್ಷೇತ್ರದಲ್ಲೂ ಭಾರತ – ಅಮೆರಿಕ ಪಾಲುದಾರಿಕೆ

‘ಸೆ. 22ರಿಂದ ನವರಾತ್ರಿ ಆರಂಭವಾಗಿದೆ. ಹಿಂದೂಗಳ ಕ್ಯಾಲೆಂಡರ್‌ನಲ್ಲಿ ಇದು ಅತ್ಯಂತ ಶುಭ ಸಂದರ್ಭವಾಗಿದೆ. ಇಂಥ ಸಂದರ್ಭದಲ್ಲಿ ಉತ್ತಮ ಕೆಲಸಗಳು ಕೈಗೂಡುವ ನಿರೀಕ್ಷೆ ಇದೆ ಎಂಬ ನಂಬಿಕೆಯೂ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪರಮಾಣು ಶಕ್ತಿ ಕ್ಷೇತ್ರದಲ್ಲೂ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಬಹುದಾದ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆದಿದೆ. ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.

‘ಅಪರೂಪದ ಮತ್ತು ನಿರ್ಣಾಯಕ ಖನಿಜ ಸಂಪತ್ತಿನ ಸರಬರಾಜು ಖಚಿತಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಇಂಥ ನಮ್ಮ ಮೂಲಗಳನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನೂ ಅವಲೋಕಿಸಲಾಗುತ್ತಿದೆ. ಈ ಎಲ್ಲದನ್ನೂ ಸಮರ್ಪಕವಾಗಿ ಬಳಸಿಕೊಂಡು ವ್ಯಾಪಾರ ಎನ್ನುವುದು ಯುದ್ಧವಲ್ಲ ಎಂಬುದನ್ನು ಸಾಬೀತು ಮಾಡುವುದು ನಮ್ಮ ಉದ್ದೇಶ’ ಎಂದು ಹೇಳಿದ್ದಾರೆ.

‘ಮೂಲಸೌಕರ್ಯ ಒದಗಿಸುವತ್ತ ಕೆಲಸ ಆಗಬೇಕಿದೆ. ವಿಶೇಷವಾಗಿ ದೇಶದೊಳಗೆ ಮತ್ತು ಗಡಿಗಳಲ್ಲಿ ಪ್ರಸರಣ ಗ್ರಿಡ್‌ ಮೂಲಸೌಕರ್ಯಗಳನ್ನು ರಚಿಸಬೇಕು. ಇದರಿಂದ ವಿವಿಧ ರಾಷ್ಟ್ರಗಳಿಗೆ ಶುದ್ಧ ಇಂಧನ ಪರಿವರ್ತನೆ ಬೆನ್ನೆಲುಬಾಗಬಹುದು. ಸರ್ಕಾರದ ಮಧ್ಯಪ್ರವೇಶದೊಂದಿಗೆ ದೇಶದ ಭವಿಷ್ಯದ ಪರಮಾಣು ಇಂಧನ ಕ್ಷೇತ್ರ ಬೆಳೆಯಲಿದೆ. ಇದನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವೂ ಭಾರತಕ್ಕಿದೆ. ಬೆಲೆ ಮತ್ತು ಇಂಧನ ಶುಲ್ಕಗಳ ಸವಾಲುಗಳೂ ಇವೆ. ಅವೆಲ್ಲವನ್ನೂ ಪರಿಹರಿಸಿ ಅತ್ಯಂತ ಸ್ಪರ್ಧಾತ್ಮಕವಾಗಿ ಮುನ್ನಡೆಯಬೇಕಿದೆ’ ಎಂದು ಪಿಯೂಷ್ ಹೇಳಿದ್ದಾರೆ.

ಇಂಧನ ಗುರಿ 500 ಗಿಗಾವ್ಯಾಟ್‌ಗೆ

‘ಶುದ್ಧ ಇಂಧನ ಮತ್ತು ಮುಂದಿನ ಐದು ವರ್ಷಗಳ ಗುರಿಯಲ್ಲಿ ಭಾರತವು ಅತ್ಯಂತ ನೆಚ್ಚಿನ ರಾಷ್ಟ್ರವಾಗಿದೆ. ಸದ್ಯ ಇರುವ 250 ಗಿಗಾವಾಟ್‌ನಿಂದ 500 ಗಿಗಾವಾಟ್‌ ಇಂಧನ ಸಾಮರ್ಥ್ಯ ಹೆಚ್ಚಳ ಭಾರತದ ಗುರಿಯಾಗಿದೆ. ಐರೋಪ್ಯ ಒಕ್ಕೂಟದ ಇಂಗಾಲ ಗಡಿ ಹೊಂದಿಸುವ ವ್ಯವಸ್ಥೆ (CBAM) ಅನ್ನು ಉಲ್ಲೇಖಿಸಿದ ಗೋಯಲ್, ಇದು ದೂರಗಾಮಿ ಪರಿಣಾಮವನ್ನು ಹೊಂದಿದೆ’ ಎಂದಿದ್ದಾರೆ.

‘ಇದು ಐರೋಪ್ಯ ಒಕ್ಕೂಟವನ್ನು ಒಂದು ಬದಿಗೆ ತಳ್ಳಲಿದೆ ಮತ್ತು ಅದರ ಆರ್ಥಿಕತೆಗೆ ಧಕ್ಕೆಯನ್ನುಂಟು ಮಾಡಲಿದೆ. ಹೀಗೆ ಮಾಡುವುದರಿಂದ ಯರೋಪ್ಯ ಒಕ್ಕೂಟವು ಒಂದು ದ್ವೀಪವಾಗಿ ಉಳಿಯಲಿದೆ. ಅವರ ಸುತ್ತಮುತ್ತಲಿನ ರಾಷ್ಟ್ರಗಳು ಪರಸ್ಪರ ವ್ಯಾಪಾರ ನಡೆಸುತ್ತಿರುತ್ತಾರೆ. ಬೆಲೆಗಳು ಸ್ಪರ್ಧಾತ್ಮವಾಗಿರದಿದ್ದರೆ ತಮ್ಮದೇ ಆರ್ಥಿಕತೆಯಲ್ಲಿ ಹಣದುಬ್ಬರ ಉಂಟು ಮಾಡಿಕೊಳ್ಳಲಿದ್ದಾರೆ’ ಎಂದು ಪಿಯೂಷ್ ಎಚ್ಚರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಅನುರಾಗ್ ಠಾಕೂರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್‌, ಯುಎಸ್‌ಐಎಸ್‌ಪಿಎಫ್‌ ಸಿಇಒ ಮತ್ತು ಅಧ್ಯಕ್ಷ ಮುಖೇಶ್ ಅಗ್ನಿ, ರಿನ್ಯೂ ಸಹ ಸಂಸ್ಥಾಪಕಿ ವೈಶಾಲಿ ನಿಗಮ್‌ ಸಿನ್ಹಾ ಮತ್ತು ಸಿಇಒ ಸುಮಂತ್ ಸಿನ್ಹಾ ಇದ್ದರು.

ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಆರಂಭಿಕ ಒಪ್ಪಂದ ಪೂರ್ಣಗೊಳಿಸುವ ಸಂಬಂಧ ಪಿಯೂಷ್ ಗೋಯಲ್ ಅವರು ನ್ಯೂಯಾರ್ಕ್‌ ಬಂದಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.