ADVERTISEMENT

ಚಂದ್ರ, ಮಂಗಳಯಾನ ಯೋಜನೆ: ಭಾರತ–ಅಮೆರಿಕ ಜಂಟಿ ಪಾಲುದಾರಿಕೆ

ಪಿಟಿಐ
Published 18 ಸೆಪ್ಟೆಂಬರ್ 2025, 3:04 IST
Last Updated 18 ಸೆಪ್ಟೆಂಬರ್ 2025, 3:04 IST
ಭಾರತ–ಅಮೆರಿಕ
ಭಾರತ–ಅಮೆರಿಕ   

ಹ್ಯೂಸ್ಟನ್: ವಾಷಿಂಗ್ಟನ್ ಡಿ.ಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಗಗನಯಾತ್ರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಪಾಲುದಾರಿಕೆಯಲ್ಲಿ ಭಾರತ ಹಾಗೂ ಅಮೆರಿಕದ ಹೊಸ ಅಧ್ಯಾಯ ಪ್ರಾರಂಭವಾಗುವ ಸೂಚನೆ ಲಭಿಸಿದೆ. ಬಾಹ್ಯಾಕಾಶ ವಲಯದಲ್ಲಿ ಉಭಯ ದೇಶಗಳ ದಶಕಗಳ ಸಹಕಾರವು ಈಗ ಚಂದ್ರ ಹಾಗೂ ಮಂಗಳಯಾನಕ್ಕೆ ದಾರಿ ಮಾಡುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಯಿತು.

ಸೋಮವಾರ ಇಂಡಿಯಾ ಹೌಸ್‌ನಲ್ಲಿ ನಡೆದ ‘ಭಾರತ–ಅಮೆರಿಕ ಬಾಹ್ಯಾಕಾಶ ಸಹಭಾಗಿತ್ವ: ಭವಿಷ್ಯದ ಪಾಲುದಾರಿಕೆಯ ಅವಕಾಶಗಳು’ ಎನ್ನುವ ಕಾರ್ಯಕ್ರಮದಲ್ಲಿ ನಾಸಾ ಹಾಗೂ ಇಸ್ರೊ ಜಂಟಿ ನಿಸಾರ್ ಉಪಗ್ರಹ ಉಡ್ಡಯನ ಹಾಗೂ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದ ಆಕ್ಸಿಯೊಮ್ ಮಿಷನ್–4 ಮೈಲಿಗಲ್ಲನ್ನು ಆಚರಿಸಲಾಯಿತು.

‘ಈ ಸಹಭಾಗಿತ್ವವು ವೈಜ್ಞಾನಿಕ ಪರಿಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ವಾಣಿಜ್ಯ ಸಹಕಾರಕ್ಕಿರುವ ವೈವಿಧ್ಯಮಯ ವೇದಿಕೆ’ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಹೇಳಿದ್ದಾರೆ.

ADVERTISEMENT

ಕಡಿಮೆ ವೆಚ್ಚದಿಂದಾಗಿ ಭಾರತದ ಬಾಹ್ಯಾಕಾಶ ಯೋಜನೆಯು ಜಗತ್ತಿಗೆ ಮಾದರಿಯಾಗಿದ್ದು, ಅಮೆರಿಕದೊಂದಿಗೆ ಸಹಭಾಗಿತ್ವವು ಮುಂಬರುವ ದಶಕಗಳಲ್ಲಿ ಮಾನವ ಬಾಹ್ಯಾಕಾಶ ಯಾನದ ಮಿತಿಗಳು ಕಡಿಮೆಗೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ನಿಸಾರ್ ಯೋಜನೆಯು ಅಂತರರಾಷ್ಟ್ರೀಯ ಸಹಭಾಗಿತ್ವಕ್ಕೆ ಒಂದು ಮಾದರಿ ಉದಾಹರಣೆ. ತಂತ್ರಜ್ಞರ ಒಟ್ಟುಗೂಡುವಿಕೆಯು ಹೇಗೆ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣವಾಗಲಿದೆ ಎಂದು ತೋರಿಸಿಕೊಟ್ಟಿದೆ’ ಎಂದು ನಾಸಾದ ಭೂವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಕರೆನ್ ಸೈಂಟ್ ಜರ್ಮೈನ್ ಹೇಳಿದ್ದಾರೆ.

ಈ ಸಮಾರಂಭದಲ್ಲಿ ನಾಸದ ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್, ನಿಕ್ ಹೇಗ್, ಬುಚ್ ವಿಲ್ಮರ್ ಹಾಗೂ ಶುಭಾಂಶು ಶುಕ್ಲಾ ಅವರು ವರ್ಚ್ಯುವಲ್ ಆಗಿ ಭಾಗಿಯಾಗಿದ್ದರು. ಅವರು ತಮ್ಮ ತರಬೇತಿ, ಬಾಹ್ಯಾಕಾಶ ನಿಲ್ದಾಣದಲ್ಲಿ ಬದುಕು ಸೇರಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ನನ್ನ ಬಾಹ್ಯಾಕಾಶ ಪ್ರಯಾಣವು ಅಂತರರಾಷ್ಟ್ರೀಯ ಸಹಭಾಗಿತ್ವದ ಬಲ ಹಾಗೂ ಜಾಗತಿಕ ಬಾಹ್ಯಾಕಾಶ ಶೋಧನೆಯಲ್ಲಿ ಬೆಳೆಯುತ್ತಿರುವ ಭಾರತದ ಪಾತ್ರಕ್ಕೆ ಸಾಕ್ಷಿ’ ಎಂದು ಶುಕ್ಲಾ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳು, ಬಾಹ್ಯಾಕಾಶ ಏಜೆನ್ಸಿಗಳು ಹಾಗೂ ಚಿಂತಕರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ, ಭಾರತ–ಅಮೆರಿಕ ಸಹಭಾಗಿತ್ವವು ಉಪಗ್ರಹ ಉಡಾವಣೆ ಹಾಗೂ ದತ್ತಾಂಶ ವಿನಿಮಯವನ್ನು ಮೀರಿ, ವಾಣಿಜ್ಯ ಬಾಹ್ಯಾಕಾಶ ಸಾಹಸ ಹಾಗೂ ಮಾನವ ಸಹಿತ ಯೋಜನೆಗೆ ತಲುಪಿರುವ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಿತು.

ಬಾಹ್ಯಾಕಾಶ ಯೋಜನೆಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗುತ್ತಿರುವುದು ವ್ಯೂಹಾತ್ಮಕವಾಗಿಯೂ ಪ್ರಭಾವ ಬೀರಲಿದೆ. ಬಾಹ್ಯಾಕಾಶದಲ್ಲಿ ಚೀನಾದ ಮಹತ್ವಾಕಾಂಕ್ಷೆಯನ್ನು ಎದುರಿಸಲು ಈ ಪಾಲುದಾರಿಕೆ ಮುಖ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.