ವಾಷಿಂಗ್ಟನ್: ‘ಭಾರತ, ಸ್ವಿಟ್ಜರ್ಲೆಂಡ್ ಸೇರಿದಂತೆ ಇತರ ದೇಶಗಳ ನಡುವಿನ ವ್ಯಾಪಾರ ಒಪ್ಪಂದಗಳು ಅಂತಿಮ ಹಂತಕ್ಕೆ ಬಂದಿಲ್ಲ. ಆದರೆ, ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗೆ ಭಾರತ ಅಸಹಕಾರ ತೋರುತ್ತಿದೆ’ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
‘ಡೊನಾಲ್ಡ್ ಟ್ರಂಪ್ ಆಡಳಿತವು ಭಾರತ ಜತೆ ಅಕ್ಟೋಬರ್ ಅಂತ್ಯದ ವೇಳೆಗೆ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ’ ಎಂದು ಬೆಸೆಂಟ್ ಹೇಳಿದ್ದಾರೆ.
‘ಉಭಯ ದೇಶಗಳಿಗೂ ವ್ಯಾಪಾರ ಒಪ್ಪಂದ ಮಹತ್ವಾಕಾಂಕ್ಷೆಯಾಗಿದೆ. ಜತೆಗೆ, ಇತರೆ ಎಲ್ಲಾ ದೇಶಗಳೊಂದಿಗೆ ಪರಸ್ಪರ ನಿಯಮಗಳನ್ನು ಒಪ್ಪಿಕೊಂಡು ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ರಾಜೇಶ್ ಅಗರ್ವಾಲ್ ನೇತೃತ್ವದಲ್ಲಿ ಅಮೆರಿಕಕ್ಕೆ ತೆರಳಿದ್ದ ತಂಡವು ವಾಷಿಂಗ್ಟನ್‌ನಿಂದ ವಾಪಸ್ ಬಂದಿದೆ. ಐದು ಸುತ್ತುಗಳಲ್ಲಿ ಮಾತುಕತೆ ನಡೆದಿದ್ದರೂ ಮಹತ್ವದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
‘ವರ್ಚುವಲ್ ವೇದಿಕೆಗಳನ್ನು ಬಳಸಿ ಮಾತುಕತೆ ಮುಂದುವರಿಸಲಾಗಿದೆ. ಆದರೂ ಮಧ್ಯಂತರ ಒಪ್ಪಂದ ಸಾಧ್ಯವಾಗುವುದು ಅನುಮಾನ’ ಎಂದು ಕೇಂದ್ರ ಸರ್ಕಾರದ ಮೂಲವೊಂದು ಹೇಳಿದೆ. ಮಾತುಕತೆ ಮುಂದುವರಿಸಲು ಅಮೆರಿಕದ ನಿಯೋಗವೊಂದು ಭಾರತಕ್ಕೆ ಶೀಘ್ರ ಭೇಟಿ ನೀಡಲಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.