ಔಮೈರ್ ಏಜಾಜ್
ಚಿತ್ರಕೃಪೆ: X / @shahidullaskar_
ವಾಷಿಂಗ್ಟನ್: ಹಲವು ವರ್ಷಗಳಿಂದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾಕಷ್ಟು ಜನರ ನಗ್ನ ಚಿತ್ರಗಳು, ವಿಡಿಯೊಗಳನ್ನು ಸೆರೆ ಹಿಡಿದ ಆರೋಪದ ಮೇಲೆ ಭಾರತ ಮೂಲದ ವೈದ್ಯನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಒಮೈರ್ ಏಜಾಜ್ ಬಂಧಿತ ಆರೋಪಿ. ಆಸ್ಪತ್ರೆಯ ಕೊಠಡಿಗಳು, ಬಾತ್‌ರೂಮ್‌ಗಳು, ಶೌಚಾಲಯ ಹಾಗೂ ತನ್ನ ಸ್ವಂತ ಮನೆಯಲ್ಲೂ ವಿವಿಧ ಕಡೆ ರಹಸ್ಯ ಕ್ಯಾಮೆರಾಗಳನ್ನು ಇರಿಸಿದ್ದ ಆರೋಪದಲ್ಲಿ ಅತನನ್ನು ಆಗಸ್ಟ್ 8ರಂದು ಬಂಧಿಸಲಾಗಿದೆ ಎಂದು 'ಫಾಕ್ಸ್ ನ್ಯೂಸ್' ವರದಿ ಮಾಡಿದೆ.
ಆರೋಪಿಯ ಪತ್ನಿಯು ನೆಯಲ್ಲಿದ್ದ ಹಲವು ಸಾಧನಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ತನ್ನದೇ ಮನೆಯಲ್ಲಿ ಎರಡು ವರ್ಷವೂ ತುಂಬಿಲ್ಲದ ಮಕ್ಕಳ ನಗ್ನ ವಿಡಿಯೊಗಳನ್ನು ಸಹ ಸೆರೆ ಹಿಡಿದಿರುವುದು ಗೊತ್ತಾಗಿದೆ.
ಸದ್ಯದ ಬಂಧನಕ್ಕೂ ಮುನ್ನ, ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯನ್ನು ಏಜಾಜ್ ಹೊಂದಿಲ್ಲ.
ಮಲಗಿದ್ದ ಅಥವಾ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಾಕಷ್ಟು ಮಹಿಳೆಯರ ವಿಡಿಯೊಗಳನ್ನು ಆರೋಪಿ ಚಿತ್ರೀಕರಿಸಿದ್ದಾನೆ ಎಂದು ಆಕ್ಲೆಂಡ್ ಕೌಂಟಿ ಶೆರಿಫ್ ಮೈಕ್ ಬೌಚರ್ಡ್ ಮಂಗಳವಾರ ಹೇಳಿದ್ದಾರೆ. ಏಜಾಜ್‌ನ ಕೃತ್ಯಗಳೆಲ್ಲವೂ ಸದ್ಯಕ್ಕೆ ಬಹಿರಂಗವಾಗಿಲ್ಲ. ಸಂಪೂರ್ಣ ತನಿಖೆ ನಡೆಸಲು ತಿಂಗಳುಗಳೇ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ಮಿಚಿಗನ್ ರಾಜ್ಯದ ಆಕ್ಲೆಂಡ್ ಕೌಂಟಿಯ ರೋಚೆಸ್ಟರ್ ಹಿಲ್ಸ್‌ನಲ್ಲಿರುವ ವೈದ್ಯನ ಮನೆಯಲ್ಲಿ ಸಾವಿರಾರು ವಿಡಿಯೊಗಳು ತನಿಖಾಧಿಕಾರಿಗಳಿಗೆ ಸಿಕ್ಕಿವೆ.
ಸಂತ್ರಸ್ತರ ಸಂಖ್ಯೆ ತುಂಬಾ ದೊಡ್ಡದು. ಘೋರ ವಿಕೃತಿ ಮೆರೆಯಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಆರೋಪಿಯನ್ನು ಬಂಧಿಸಿದ ನಂತರ ಕಂಪ್ಯೂಟರ್‌ಗಳು, ಫೋನ್‌ಗಳು ಮತ್ತು ಹಲವು ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದೇ ಹಾರ್ಡ್‌ಡ್ರೈವ್‌ನಲ್ಲಿ 13,000 ವಿಡಿಯೊಗಳು ಪತ್ತೆಯಾಗಿವೆ. ಅವು ಕ್ಲೌಡ್ ಸ್ಟೋರೇಜ್‌ಗೂ ಅಪ್‌ಲೋಡ್ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ ಮೈಕ್.
ಏಜಾಜ್ ವಿರುದ್ಧ ಆಗಸ್ಟ್ 13ರಂದು ಆರೋಪಪಟ್ಟಿ ಸಲ್ಲಿಸಲಾಗಿದ್ದು. ಇದರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ನಗ್ನ ಚಿತ್ರ, ವಿಡಿಯೊ ಸೆರೆ ಹಿಡಿದಿರುವುದು ಹಾಗೂ ಕೃತ್ಯಕ್ಕೆ ಕಂಪ್ಯೂಟರ್‌ಗಳನ್ನು ಬಳಸಿದ ಆರೋಪಗಳನ್ನು ಉಲ್ಲೇಖಿಸಲಾಗಿದೆ.
ಏಜಾಜ್ ಪತ್ನಿ ಅವರು ಕೃತ್ಯಕ್ಕೆ ಸಂಬಂಧಿಸಿದ ಕೆಲವು ಸಾಧನಗಳನ್ನು ಈ ತಿಂಗಳ ಆರಂಭದಲ್ಲೇ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಶೆರಿಫ್ ಕಚೇರಿ ತಕ್ಷಣವೇ ಕ್ರಮ ಕೈಗೊಂಡಿದೆ. ಮತ್ತಷ್ಟು ಸಾಧನಗಳನ್ನು ವಶಕ್ಕೆ ಪಡೆಯಲು ಸರ್ಚ್ ವಾರಂಟ್‌ಗಳನ್ನು ನೀಡಿದೆ ಎಂದು ಆಕ್ಲೆಂಡ್ ಕೌಂಟಿ ಪ್ರಾಸಿಕ್ಯೂಟರ್ ಕರೆನ್ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
'ತನಿಖೆ ಮುಂದುವರಿದಿದೆ. ಈ ವೇಳೆ ಬಹಿರಂಗವಾಗಿರುವ ಚಿತ್ರಗಳು ತಲ್ಲಣ ಸೃಷ್ಟಿಸಿವೆ' ಎಂದು ಏಜಾಜ್ ಪತ್ನಿ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.