ADVERTISEMENT

ಅಂಗವೈಕಲ್ಯದಿಂದ ಜನಿಸಿದ ಮಗು: ಆಸ್ಟ್ರೇಲಿಯಾದಲ್ಲಿ ಭಾರತೀಯ ಕುಟುಂಬ ಗಡೀಪಾರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 3:50 IST
Last Updated 23 ಮಾರ್ಚ್ 2021, 3:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ: ಅಂಗವೈಕಲ್ಯದಿಂದ ಮಗು ಜನಿಸಿರುವ ಕಾರಣ ಆಸ್ಟ್ರೇಲಿಯಾ ಸರ್ಕಾರವು ಭಾರತೀಯ ಕುಟುಂಬವನ್ನು ಗಡೀಪಾರು ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

8 ವರ್ಷಗಳಿಗೂ ಹೆಚ್ಚು ಕಾಲದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ದಂಪತಿ ಮಗನಾದ ಆರು ವರ್ಷದ ಕಯಾನ್ ಕಟ್ಯಾಲ್, ಹುಟ್ಟಿನಿಂದಲೇ ‘ಸೆರೆಬ್ರಲ್ ಪಾಲ್ಸಿ’ ಎಂಬ ಸಮಸ್ಯೆಗೆ ತುತ್ತಾಗಿದ್ದಾರೆ.

‘ನಮ್ಮ ಮಗ ಆಸ್ಟ್ರೇಲಿಯಾದ ಜನನ ಪ್ರಮಾಣಪತ್ರವನ್ನು ಹೊಂದಿದ್ದಾನೆ. ಆದರೆ, ಆಸ್ಟ್ರೇಲಿಯಾದಲ್ಲಿ ಅವನಿಗೆ ಇನ್ನೂ ಯಾವುದೇ ಹಕ್ಕುಗಳು ಸಿಕ್ಕಿಲ್ಲ. ಅದು ನಮ್ಮ ಹೃದಯವನ್ನು ಒಡೆಯುತ್ತಿದೆ ”ಎಂದು ಅವರ ತಂದೆ ವರುಣ್ ನ್ಯೂಸ್ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ADVERTISEMENT

ಆಸ್ಟ್ರೇಲಿಯಾದಲ್ಲಿ ಶಾಶ್ವತ ನಿವಾಸಿಗಳಾಗಲು ಕಾಯುತ್ತಿರುವ ವರುಣ್ ಕುಟುಂಬ, ಅಲ್ಲಿ ರೆಸ್ಟೋರೆಂಟ್ ತೆರೆಯಲು ಬಯಸಿದ್ದು, ಅದಕ್ಕೆ ಬೇಕಾದ ಎಲ್ಲ ತೆರಿಗೆಗಳನ್ನು ಪಾವತಿಸಿ, ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದೆ.

"ನಮ್ಮ ವೀಸಾ ಅರ್ಜಿಯಲ್ಲಿ ತಪ್ಪಾಗಿರುವ ಏಕೈಕ ವಿಷಯ ನಮ್ಮ ಕೈಯಲ್ಲಿ ಇರಲಿಲ್ಲ. ನಮ್ಮ ಕೈಯಲ್ಲಿದ್ದ ವಿಷಯಗಳನ್ನು ನಾವು ಸರಿಯಾಗಿ ಮಾಡಿದ್ದೇವೆ, ”ಎಂದು ವರುಣ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ವಲಸೆ ಕಾಯ್ದೆಯಡಿ, ಶಾಶ್ವತ ನಿವಾಸಿಗಳಲ್ಲದ ಕುಟುಂಬಗಳು ತಮ್ಮ ಮಕ್ಕಳಲ್ಲಿ ಅಂಗವೈಕಲ್ಯ ಹೊಂದಿದ್ದರೆ ಅವರನ್ನು ಗಡೀಪಾರು ಮಾಡಬೇಕಾಗುತ್ತದೆ.

ಈವರೆಗೆ ಅಂಗವೈಕಲ್ಯದಿಂದಾಗಿ ಎಷ್ಟು ಮಕ್ಕಳನ್ನು ಗಡೀಪಾರು ಮಾಡಲಾಗಿದೆ ಎಂಬ ಮಾಹಿತಿಯು ಸ್ಪಷ್ಟವಾಗಿಲ್ಲ. ಆದರೆ, ಪ್ರತಿ ವರ್ಷ ಈ ರೀತಿಯ ಡಜನ್ ಪ್ರಕರಣಗಳು ಕಂಡುಬರುತ್ತವೆ ಎಂದು ವರದಿ ಹೇಳಿದೆ.

“ಅವರು ಶಾಶ್ವತ ನಿವಾಸಿಗಳಾಗುವ ಹಾದಿಯಲ್ಲಿದ್ದಾರೆ, ಹೀಗಿರುವಾಗ ಅವರ ಮಗನ ಅಂಗವೈಕಲ್ಯ ಸಮಸ್ಯೆಯಾಯಿತೇ’ ಎಂದು ’ವೆಲ್ಕಮಿಂಗ್ ಡಿಸೆಬಿಲಿಟಿ’ ಎಂಬ ವಕೀಲರ ಗುಂಪಿನ ಸಹ-ಸಂಸ್ಥಾಪಕ ಜಾನ್ ಗೋಥಾರ್ಡ್ ಪ್ರಶ್ನಿಸಿರುವುದಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವಸಂಸ್ಥೆ, ತನ್ನ 2019ರ ವರದಿಯಲ್ಲಿ ಆಸ್ಟ್ರೇಲಿಯಾದ ವಲಸೆ ನಿಯಮಗಳ ಬಗ್ಗೆ ಚಕಾರ ಎತ್ತಿದ್ದು, ಅದನ್ನು ಹೆಚ್ಚು ನ್ಯಾಯಸಮ್ಮತಗೊಳಿಸುವಂತೆ ಸೂಚಿಸಿದೆ.

ಆಸ್ಟ್ರೇಲಿಯಾದ ಮತ್ತೊಂದು ಕುಟುಂಬವು ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಶಾಶ್ವತ ನಿವಾಸಕ್ಕಾಗಿ ಹೋರಾಡುತ್ತಿದೆ, ಆದರೆ, ಅವರ ಮಗುವಿನ ಅನಾರೋಗ್ಯ ಸ್ಥಿತಿ ಕಾರಣವೊಡ್ಡಿ ರೆಡ್ ಸಿಗ್ನಲ್ ತೋರಿಸಲಾಗಿದೆ.

ಆದರೆ, ಅಲ್ಲಿನ ವಲಸೆ ಜನರಿಗೆ ಹಕ್ಕುಗಳನ್ನು ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಇಲಾಖೆ, ಪ್ರಸ್ತುತ ಇರುವ ನಿಯಮಗಳು ಪ್ರಾಯೋಗಿಕ ಮತ್ತು ಸಮತೋಲಿತ ಸಹಾನುಭೂತಿಯನ್ನು ಒಳಗೊಂಡಿವೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.