ADVERTISEMENT

ಕ್ರೀಡಾ ಮೂಲಸೌಕರ್ಯಕ್ಕಾಗಿ ಮಾಲ್ಡೀವ್ಸ್‌ಗೆ ₹290 ಕೋಟಿ ಸಾಲ ನೀಡಿದ ಭಾರತ: ಜೈಶಂಕರ್

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಾಹಿತಿ

ಪಿಟಿಐ
Published 20 ಫೆಬ್ರುವರಿ 2021, 15:32 IST
Last Updated 20 ಫೆಬ್ರುವರಿ 2021, 15:32 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ಮಾಲೆ: ಮಾಲ್ಡೀವ್ಸ್‌ ದೇಶದ ಕ್ರೀಡಾ ಮೂಲಸೌಕರ್ಯ ವೃದ್ಧಿಸುವ ಉದ್ದೇಶದಿಂದ ಭಾರತವು ಮಾಲ್ಡೀವ್ಸ್‌ಗೆ ₹290.20 ಕೋಟಿ ಸಾಲ ನೀಡಿದೆ.

ಇಲ್ಲಿನ ಎಕುವೇನಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಈ ವಿಷಯ ಪ್ರಕಟಿಸಿದರು.

ಮಾಲ್ಡೀವ್ಸ್‌ ಮತ್ತು ಮಾರಿಷಷ್‌ ಪ್ರವಾಸ ಕೈಗೊಂಡಿರುವ ಜೈಶಂಕರ್‌ ಅವರು ಇದಕ್ಕೂ ಮೊದಲು ಮಾಲ್ಡೀವ್ಸ್‌ಗೆ ಹೆಚ್ಚುವರಿ ಒಂದು ಲಕ್ಷ ಕೊರೊನಾ ಲಸಿಕೆಗಳನ್ನು ಹಸ್ತಾಂತರಿಸಿದರು.

ADVERTISEMENT

‘ಮಾಲ್ಡೀವ್ಸ್ ಜನರ ಹಿತಾಸಕ್ತಿಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶದ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಭಾರತವು ₹290.20 ಕೋಟಿ ಸಾಲವಾಗಿ ನೀಡುತ್ತಿರುವುದನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ’ ಎಂದು ಜೈಶಂಕರ್ ಹೇಳಿದರು.

‘ಮಾಲ್ಡೀವ್ಸ್‌ ಜನರು ಅಪಾರ ಕ್ರೀಡಾ ಪ್ರತಿಭೆ ಹೊಂದಿದ್ದಾರೆ. ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಕ್ರೀಡೆಗಳಿಗೆ ನೀಡಿದ ಹೆಚ್ಚಿನ ಆದ್ಯತೆಯನ್ನು ನಮ್ಮ ದೇಶ ಗಮನಿಸಿದೆ. ಅವರ ಪ್ರಯತ್ನದಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ’ ಎಂದು ಅವರು ಹೇಳಿದರು.

ಇದೇ ವೇಳೆ ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವರು, ಮಾಲ್ಡೀವ್ಸ್‌ ಜತೆಗೆ ಭಾರತವು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಒತ್ತುಕೊಡಲಿದೆ ಎಂದು ತಿಳಿಸಿದ್ದಾರೆ.

‘ಭಾರತವು ದೊಡ್ಡಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪೂರೈಸಿರುವ ದೇಶವೆಂದರೆ ಮಾಲ್ಡೀವ್ಸ್‌. ಭಾರತ ತಯಾರಿಸಿದ ಲಸಿಕೆಗಳನ್ನು ಪಡೆದ ಮೊದಲ ದೇಶವೂ ಮಾಲ್ಡೀವ್ಸ್‌ ಆಗಿದೆ. ಪ್ರಧಾನಿ ಮೋದಿಯವರ ‘ನೆರೆಹೊರೆಯ ಮೊದಲ ನೀತಿ’ಯಲ್ಲಿ ಮಾಲ್ಡೀವ್ಸ್‌ಗೆ ಅಗ್ರಸ್ಥಾನವಿದೆ. ನಮ್ಮ ಸಮಯ ಪರೀಕ್ಷಿತ ಸಂಬಂಧವು ಇಂದು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ’ ಎಂದು ಸಚಿವರು ಹೇಳಿದರು.

ಜೈಶಂಕರ್ ಅವರು ಈ ಭೇಟಿಯ ಸಮಯದಲ್ಲಿ, ಭಾರತೀಯ ಅನುದಾನದಲ್ಲಿ ಕೈಗೊಂಡ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳನ್ನೂ ಮಾಡಿಕೊಳ್ಳಲಿದ್ದಾರೆ ಎಂದು ಮಾಲ್ಡೀವ್ಸ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಲ್ಲದೇ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಸ್ಪೀಕರ್ ಮೊಹಮ್ಮದ್ ನಶೀದ್ ಅವರನ್ನು ಜೈಶಂಕರ್‌ ಭೇಟಿ ಮಾಡಲಿದ್ದಾರೆ. ರಕ್ಷಣಾ, ಹಣಕಾಸು, ಆರ್ಥಿಕ ಅಭಿವೃದ್ಧಿ, ಯೋಜನೆ ಮತ್ತು ಮೂಲಸೌಕರ್ಯದ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.