ADVERTISEMENT

ಭಾರತದ ಅನಿಯಂತ್ರಿತ ಶಸ್ತ್ರಾಸ್ತ್ರ ಸಂಗ್ರಹದಿಂದ ಶಾಂತಿ, ಸ್ಥಿರತೆಗೆ ಭಂಗ: ಪಾಕ್

ಪಿಟಿಐ
Published 20 ಆಗಸ್ಟ್ 2022, 7:29 IST
Last Updated 20 ಆಗಸ್ಟ್ 2022, 7:29 IST
ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌
ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌    

ಇಸ್ಲಾಮಾಬಾದ್‌: ಭಾರತ ಅನಿಯಂತ್ರಿತವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿರುವುದರಿಂದ ಶಾಂತಿ ಮತ್ತು ಸ್ಥಿರತೆಗೆ ಭಂಗ ಉಂಟಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ.

ಪಾಕಿಸ್ತಾನದ ಗಡಿಯಿಂದ ಕೇವಲ 90-100 ಕಿಮೀ ದೂರದಲ್ಲಿ ಆದಂಪುರ ಮತ್ತು ಪಂಜಾಬ್‌ನ ಹಲ್ವಾರಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯು ರಷ್ಯಾದ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಕಚೇರಿಯ ವಕ್ತಾರ ಅಸಿಮ್ ಇಫ್ತಿಕರ್ ಅಹ್ಮದ್ ಈ ಹೇಳಿಕೆ ನೀಡಿದ್ದಾರೆ.

'ಭಾರತದ ಯುದ್ಧೋನ್ಮಾದ ಮನೋಭಾವ ಮತ್ತು ಹಲವು ವರ್ಷಗಳಿಂದ ಅನಿಯಂತ್ರಿವಾಗಿ ನಡೆಯುತ್ತಿರುವ ಶಸ್ತ್ರಾಸ್ತ್ರ ಸಂಗ್ರಹವು ನಮ್ಮ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆ, ಅಸಮತೋಲನಕ್ಕೆ ಕಾರಣವಾಗಿದೆ. ಹೀಗಾಗಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯುಂಟಾಗುತ್ತಿದೆ ಎಂಬುದು ಪಾಕಿಸ್ತಾನದ ದೀರ್ಘಕಾಲದ ಕಳವಳವಾಗಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರಇಫ್ತಿಕರ್‌ ಅಹ್ಮದ್‌ ತಿಳಿಸಿದ್ದಾರೆ.

ADVERTISEMENT

‘ಪಾಕಿಸ್ತಾನವು ತನ್ನ ಚಿಂತೆಯನ್ನು ಮಿತ್ರರಾಷ್ಟ್ರಗಳು, ಅಂತರರಾಷ್ಟ್ರೀಯ ಸಮುದಾಯದ ಸದಸ್ಯರೊಂದಿಗೆ ಹಂಚಿಕೊಂಡಿದೆ. ವಿಶ್ವಸಂಸ್ಥೆಯ ಸಂಬಂಧಿತ ವೇದಿಕೆಗಳಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿದೆ’ ಎಂದು ಅವರು ಹೇಳಿದರು.

‘ಭಾರತ ಹೊಂದಿರುವ ಒಟ್ಟು ಮಿಲಿಟರಿ ಸಾಮರ್ಥ್ಯದ ಸುಮಾರು ಶೇಕಡ 70ರಷ್ಟನ್ನು ಪಾಕಿಸ್ತಾನದ ವಿರುದ್ಧ ನಿಯೋಜಿಸಲಾಗಿದೆ. ಆದ್ದರಿಂದ ನಿಸ್ಸಂಶಯವಾಗಿ ನಾವು ಎಲ್ಲಾ ಸಂಬಂಧಿತ ಬೆಳವಣಿಗೆಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ’ ಎಂದು ಅವರು ಹೇಳಿದರು.

ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಕ್ರಮಗಳಿಗೆ ಪ್ರತಿಯಾಗಿ ಭಾರತದ ಕಡೆಯ ಪ್ರತಿಕ್ರಿಯೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸಮಯದಲ್ಲಿ ಭಾರತದೊಂದಿಗಿನ ಸಂಬಂಧವು ನಿಜವಾಗಿಯೂ ಹದಗೆಟ್ಟಿದೆ. ಇದಕ್ಕೆ ಭಾರತದ ಕ್ರಮಗಳು... ಅದರಲ್ಲೂ ವಿಶೇಷವಾಗಿ 2019ರ ಆಗಸ್ಟ್ 5ರ ನಂತರದ ಕ್ರಮಗಳು ಕಾರಣವಾಗಿವೆ. ಸಂಬಂಧಗಳನ್ನು ಸುಧಾರಿಸುವ ವಿಚಾರದಲ್ಲಿ ನಮಗೆ ಭಾರತದ ಕಡೆಯಿಂದ ಯಾವುದೇ ಸಕಾರಾತ್ಮಕ ಅಂಶಗಳು ಕಾಣಿಸಿಲ್ಲ’ ಎಂದು ಅವರು ತಿಳಿಸಿದರು.

ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತ ಪ್ರಶ್ನೆಗೂ ಅವರು ‘ಇಲ್ಲ’ ಎಂದು ಉತ್ತರ ನೀಡಿದರು.

2019ರ ಆಗಸ್ಟ್‌ನಲ್ಲಿ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನವನ್ನು ಹಿಂಪಡೆದು, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತು. ಭಾರತದ ಈ ಕ್ರಮವನ್ನು ಪಾಕಿಸ್ತಾನ ವಿರೋಧಿಸಿದೆ. ಈ ಬೆಳವಣಿಗೆ ನಂತರ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ವಹಿವಾಟು ಮುರಿದುಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.