ADVERTISEMENT

ಪ್ರವಾದಿ ಮಹಮ್ಮದ್ ಅವಹೇಳನ: ಭಾರತದ ರಾಯಭಾರಿಗೆ ಇಂಡೊನೇಷ್ಯಾ ಸಮನ್ಸ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 14:47 IST
Last Updated 7 ಜೂನ್ 2022, 14:47 IST
ನೂಪುರ್ ಶರ್ಮಾ
ನೂಪುರ್ ಶರ್ಮಾ   

ಜಕಾರ್ತ: ಪ್ರವಾದಿ ಮಹಮ್ಮದರ ಕುರಿತು ನೀಡಲಾಗಿರುವ ವಿವಾದಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪೋಸ್ಟ್‌ಗಳಿಗೆ ‌ಸಂಬಂಧಿಸಿದಂತೆಜಕಾರ್ತದಲ್ಲಿರುವ ಭಾರತದ ರಾಯಭಾರಿಗೆ ಇಂಡೊನೇಷ್ಯಾ ಸರ್ಕಾರ ಮಂಗಳವಾರ ಸಮನ್ಸ್ ನೀಡಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹಾಗೆಯೇ, ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು.

ಈ ವಿಚಾರಗಳಿಗೆ ಸಂಬಂಧಿಸಿದಂತೆ ಅರಬ್‌ ರಾಷ್ಟ್ರಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್‌ ನೀಡಿದ್ದವು. ಕುವೈತ್‌ ಸೂಪರ್‌ ಮಾರ್ಕೆಟ್‌ನಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂಡೊನೇಷ್ಯಾ ಕೂಡ ಕ್ರಮ ಕೈಗೊಂಡಿದೆ.

ADVERTISEMENT

ಸಮನ್ಸ್‌ ನೀಡಿರುವ ವಿಚಾರವನ್ನು ಇಂಡೊನೇಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ತೆವುಕು ಫಜಾಸ್ಯಾಹ್ ಖಚಿತಪಡಿಸಿದ್ದಾರೆ. ಜಕಾರ್ತದಲ್ಲಿರುವ ಭಾರತದ ರಾಯಭಾರಿ ಮನೋಜ್ ಕುಮಾರ್ ಭಾರ್ತಿ ಅವರನ್ನು ಸೋಮವಾರ ಕರೆದು ಪ್ರತಿಭಟನೆ ದಾಖಲಿಸಿದ್ದು, ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧವಾಗಿ ಇಂಡೊನೇಷ್ಯಾ ವಿದೇಶಾಂಗ ಸಚಿವಾಲಯ ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ಭಾರತದ ಇಬ್ಬರು ರಾಜಕಾರಣಿಗಳು ನೀಡಿರುವ ಆಕ್ಷೇಪಾರ್ಹ ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇವೆ ಎಂದು ಹೇಳಲಾಗಿದೆ.

ನೂಪುರ್ ಹೇಳಿಕೆಗಳು ವಿವಾದ ಸೃಷ್ಟಿಸಿದ್ದರಿಂದ ಅವರನ್ನು ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ಬಿಜೆಪಿ ಅಮಾನತು ಮಾಡಿದೆ.ಜಿಂದಾಲ್ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.