
ಇರಾನ್‌ನ ಪ್ರತಿಭಟನಕಾರರನ್ನು ಬೆಂಬಲಿಸಿ ಇಸ್ರೇಲ್‌ನ ಹೊಲೊನ್ ನಗರದಲ್ಲಿ ಗುರುವಾರ ನಾಗರಿಕರು ಪ್ರತಿಭಟನೆ ನಡೆಸಿದರು
–ಪಿಟಿಐ ಚಿತ್ರ
ದುಬೈ/ಪ್ಯಾರಿಸ್/ವಾಷಿಂಗ್ಟನ್/ರಿಯಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ, ಬಂಧಿತ ಪ್ರತಿಭಟನಕಾರರ ವಿಚಾರಣೆಯನ್ನು ತ್ವರಿತವಾಗಿ ನಡೆಸಿ, ಅವರನ್ನು ಮರಣ ದಂಡನೆಗೆ ಗುರಿಪಡಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಇರಾನ್‌ನ ನ್ಯಾಯಾಂಗ ಗುರುವಾರ ಹೇಳಿದೆ.
ಅಮೆರಿಕದ ಕೋರಿಕೆಯಂತೆ ಇರಾನ್ ಬೆಳವಣಿಗೆ ಕುರಿತು ಚರ್ಚಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಭೆ ಕರೆದಿತ್ತು. ಆದರೆ, ಸಭೆ ನಡೆಯುವ ಕೆಲವು ಗಂಟೆಗಳ ಮುನ್ನ ಮರಣದಂಡನೆ ಜಾರಿಗೊಳಿಸುವ ನಿರ್ಧಾರದಿಂದ ಇರಾನ್ ಹಿಂದೆ ಸರಿದಿರುವ ಮಾಹಿತಿ ಹೊರಬಿದ್ದಿದೆ.
ಇದರ ಬೆನ್ನಲ್ಲೇ, ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಬೆದರಿಕೆ ಒಡ್ಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
‘ಮೂಲವೊಂದರ ಪ್ರಕಾರ, ಪ್ರತಿಭಟನಕಾರರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತಿಲ್ಲ ಎಂಬ ಭರವಸೆ ಸಿಕ್ಕಿದೆ. ಹಲವು ಜನರನ್ನು ಜ.15ರಂದು (ಗುರುವಾರ) ಗಲ್ಲು ಶಿಕ್ಷೆಗೆ ಗುರಿಪಡಿಸಲು ಇರಾನ್ ನಿರ್ಧರಿಸಿತ್ತು. ಈಗ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಾವು ಕೂಡ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಟ್ರಂಪ್ ತಿಳಿಸಿದ್ದಾರೆ.
‘ಇರಾನ್‌ನ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಕಾದು ನೋಡೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇರಾನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವರ ಪೈಕಿ 3,428 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ಪ್ರತಿಭಟನಕಾರರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಇತ್ತೀಚೆಗೆ ಟ್ರಂಪ್ ಕೂಡ ಎಚ್ಚರಿಸಿದ್ದರು.
‘ಮರಣದಂಡನೆ ಇಲ್ಲ’: ‘ಜನವರಿ 15ರಂದು ಯಾರಿಗೂ ಗಲ್ಲು ಶಿಕ್ಷೆ ವಿಧಿಸಿಲ್ಲ, 16ರಂದೂ ಇಂತಹ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಅಮೆರಿಕದ ‘ಫಾಕ್ಸ್‌ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಮಿತ್ರರಾಷ್ಟ್ರ ಇಸ್ರೇಲ್, ಇರಾನ್‌ನಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
‘ಇರಾನ್‌ಗೆ ಒಂದು ಅವಕಾಶ ಕೊಡಿ’: ‘ಪ್ರತಿಭಟನಕಾರರ ಮೇಲೆ ಕ್ರಮ ಕೈಗೊಳ್ಳದಿರುವುದು ಸೇರಿ ಸದುದ್ದೇಶದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇರಾನ್‌ಗೆ ಒಂದು ಅವಕಾಶ ನೀಡುವಂತೆ ಸೌದಿ ಅರೇಬಿಯಾ, ಕತಾರ್ ಹಾಗೂ ಒಮಾನ್ ನಾಯಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವೊಲಿಸಿದರು’ ಎಂದು ಸೌದಿ ಅರೇಬಿಯಾ ಅಧಿಕಾರಿಯೊಬ್ಬರು ರಿಯಾದ್‌ನಲ್ಲಿ ಗುರುವಾರ ಹೇಳಿದ್ದಾರೆ.
‘ಇರಾನ್ ಮೇಲಿನ ಯಾವುದೇ ದಾಳಿಯು ಭೀಕರವಾಗಿರಲಿದೆ ಹಾಗೂ ಅದು ಮಧ್ಯಪ್ರಾಚ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ವಿವರಿಸಲಾಯಿತು. ಸುದೀರ್ಘ ಮಾತುಕತೆ ಬಳಿಕ ಟ್ರಂಪ್ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಯಿತು. ಈ ಮೂರು ದೇಶಗಳು ಟ್ರಂಪ್ ಅವರೊಂದಿಗೆ ಮಾತುಕತೆ ಮುಂದುವರಿಸಿವೆ’ ಎಂದು ತಿಳಿಸಿದ್ದಾರೆ.
‘ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಿದರೆ ಆಗುವ ಪರಿಣಾಮಗಳ ಕುರಿತು ಇರಾನ್‌ಗೂ ತಿಳಿಸಲಾಯಿತು. ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ನಡೆಸುವ ದಾಳಿಗಳಿಂದ ಈ ಪ್ರದೇಶದಲ್ಲಿನ ರಾಷ್ಟ್ರಗಳ ನಡುವಿನ ಸಂಬಂಧದ ಮೇಲೂ ಪರಿಣಾಮ ಉಂಟಾಗಲಿದೆ ಎಂಬುದನ್ನು ಸಹ ಇರಾನ್‌ಗೆ ತಿಳಿಸಲಾಯಿತು’ ಎಂದು ಸೌದಿ ಅರೇಬಿಯಾದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಇಡೀ ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೂರು ದಿನ ನಡೆದ ಭಯೋತ್ಪಾದಕ ದಾಳಿಯ ಬಳಿಕ ವಾತಾವರಣವು ಶಾಂತವಾಗಿದೆಅಬ್ಬಾಸ್ ಅರಾಘ್ಚಿ ಇರಾನ್‌ನ ವಿದೇಶಾಂಗ ಸಚಿವ
ಗಲ್ಲಿನಿಂದ ಎರ್ಫಾನ್ ಪಾರು
ಇರಾನ್‌ನ ಇಸ್ಲಾಮಿಕ್ ಆಡಳಿತ ವ್ಯವಸ್ಥೆ ಹಾಗೂ ದೇಶದ ಭದ್ರತೆ ವಿರುದ್ಧ ಪ್ರಚಾರ ನಡೆಸಿ ದಂಗೆ ಸೃಷ್ಟಿಗೆ ಕಾರಣವಾದ ಆರೋಪದ ಮೇಲೆ ಟೆಹರಾನ್‌ನ ಹೊರವಲಯದಲ್ಲಿರುವ ಕರಾಜ್ ಜೈಲಿನಲ್ಲಿ ಬಂಧಿತನಾಗಿರುವ ಎರ್ಫಾನ್ ಸೊಲ್ತಾನಿಯನ್ನು (26) ಗುರುವಾರ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ‘ಎರ್ಫಾನ್‌ಗೆ ಮರಣದಂಡನೆ ವಿಧಿಸಲಾಗಿಲ್ಲ’ ಎಂದು ಇರಾನ್‌ನ ನ್ಯಾಯಾಂಗ ಇಲಾಖೆಯು ಗುರುವಾರ ಸ್ಪಷ್ಟನೆ ನೀಡಿದೆ. ಕಾನೂನಿನ ಪ್ರಕಾರ ಅವರ ತಪ್ಪು ಮಾಡಿರುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅವರು ಅಪರಾಧ ಎಸಗಿರುವುದು ಸಾಬೀತಾದರೂ ಅದಕ್ಕಾಗಿ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದೂ ಸ್ಪಷ್ಟನೆ ನೀಡಿದೆ.
ಪ್ರಮುಖ ಅಂಶಗಳು
* ಗುರುವಾರ ಬೆಳಿಗ್ಗೆ ನಾಲ್ಕು ಗಂಟೆಗಳಷ್ಟು ಇರಾನ್ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿತ್ತು. ಇರಾನ್ ವಾಯುಪ್ರದೇಶವು ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳನ್ನು ಸಂಪರ್ಕಿಸುವ ಪ್ರಮುಖ ವಾಯುಮಾರ್ಗವಾಗಿರುವ ಕಾರಣ ಅನೇಕ ಅಂತರರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು
* ಫೆ.10ರ ವರೆಗೆ ಇರಾನ್ ವಾಯುಪ್ರದೇಶದ ಮೂಲಕ ವಿಮಾನಗಳ ಸಂಚಾರ ಸ್ಥಗಿತಗೊಳಿಸುವಂತೆ ಜರ್ಮನಿಯ ವಿಮಾನ ಸುರಕ್ಷತಾ ಕಚೇರಿ ಸಲಹೆ ನೀಡಿದೆ
* ಅಮೆರಿಕದಲ್ಲಿ ಆಶ್ರಯ ಪಡೆದಿರುವ ಇರಾನ್‌ನ ನಾಯಕ ರೆಜಾ ಪಹ್ಲವಿ ಆಡಳಿತದ ಚುಕ್ಕಾಣಿ ಹಿಡಿಯಲು ಯೋಗ್ಯ ವ್ಯಕ್ತಿ ಎಂದು ಕಂಡುಬರುತ್ತದೆ. ಆದರೆ ಅವರಿಗೆ ಜನರ ಬೆಂಬಲ ಸಿಗುವ ಬಗ್ಗೆ ಅನುಮಾನವಿದೆ ಎಂದು ಟ್ರಂಪ್ ಹೇಳಿದ್ದಾರೆ
* ಇರಾನ್‌ನಲ್ಲಿ ಕಳೆದ ಒಂದು ವಾರದಿಂದ ಕಂಡುಬಂದಿದದ ಆಡಳಿತ ವಿರೋಧಿ ಪ್ರತಿಭಟನೆಗಳು ತೀವ್ರತೆಯನ್ನು ಕಳೆದುಕೊಂಡಿರುವಂತೆ ಗುರುವಾರ ಕಂಡುಬಂತು. ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ರಾಜಧಾನಿ ಟೆಹರಾನ್‌ನ ಬೀದಿಗಳಲ್ಲಿ ಯಾವುದೇ ಪ್ರತಿಭಟನೆ ರಾತ್ರಿ ವೇಳೆ ಪಂಜಿನ ಮೆರವಣಿಗೆಗಳು ಕಂಡುಬಂದಿಲ್ಲ. ಪ್ರತಿಭಟನೆ ನಡೆದಿರುವುದನ್ನು ತೋರುವ ಯಾವುದೇ ಅವಶೇಷಗಳು ಬೀದಿಗಳಲ್ಲಿ ಕಂಡುಬಂದಿಲ್ಲ. ಹೋರಾಟಗಾರರನ್ನು ಚದುರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಿದ ಶಬ್ದವೂ ಕೇಳಿಲ್ಲ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.