
ದುಬೈ/ವಾಷಿಂಗ್ಟನ್/ಕೈರೊ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.
ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ’ ಎಂದು ಇರಾನ್‌ನ ಜನರಿಗೆ ಕರೆ ನೀಡಿದ್ದಾರೆ. ಆ ಮೂಲಕ ದಶಕಗಳ ‘ಧರ್ಮಾಧಾರಿತ ಪ್ರಭುತ್ವ’ (ಖಮೇನಿ ಆಡಳಿತ) ಕೊನೆಗೊಳಿಸಲು ನಿಮಗೆ ಅವಕಾಶ ನೀಡಿದ್ದೇವೆ’ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ಉಭಯ ರಾಷ್ಟ್ರಗಳು ನಡೆಸಿದ ದಾಳಿಗಳು ಕೊಲ್ಲಿಯಲ್ಲಿನ ತೈಲ ಉತ್ಪಾದಕ ರಾಷ್ಟ್ರಗಳನ್ನು ಸಂಕಷ್ಟಕ್ಕೆ ದೂಡಿವೆ.
ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ನಿವಾಸಗಳನ್ನು ಗುರಿಯಾಗಿರಿಸಿಕೊಂಡು ಟೆಹರಾನ್‌ನ ಹೃದಯ ಭಾಗದ ಮೇಲೆ ಅಮೆರಿಕ ದಾಳಿ ನಡೆಸಿದೆ. ದಾಳಿಯ ಮುನ್ಸೂಚನೆ ಅರಿತ ಖಮೇನಿ ಟೆಹರಾನ್‌ನಲ್ಲಿ ಇರಲಿಲ್ಲ. ಬದಲಾಗಿ ಸುರಕ್ಷಿತ ಸ್ಥಳಕ್ಕೆ ಅವರನ್ನು ಸ್ಥಳಾಂತರಗೊಳಿಸಲಾಗಿತ್ತು ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್‌ನ ನಾಯಕರನ್ನು ಗುರಿಯಾಗಿರಿಸಿಕೊಂಡು ‘ಆಪರೇಷನ್ ಏಪಿಕ್ ಫ್ಯೂರಿ’ ಹೆಸರಿನಲ್ಲಿ ಅಮೆರಿಕ ಮೊದಲ ಹಂತದ ದಾಳಿಗಳನ್ನು ನಡೆಸಿತು ಎಂದು ಮೂಲಗಳು ತಿಳಿಸಿವೆ.
ಟೆಹರಾನ್‌ನ ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ರ ಸುಮಾರಿಗೆ ನಗರದ ಪ್ರಮುಖ ಸ್ಥಳಗಳಲ್ಲಿ ಸ್ಫೋಟಗಳು ಉಂಟಾದವು. ನಗರದ ಜೊಮ್ಹೌರಿ ವೃತ್ತ, ಹಸನ್ ಅಬಾದ್ ವೃತ್ತದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು.
ಉಳಿದಂತೆ, ಇರಾನ್‌ನ ಇತರೆ ನಗರಗಳಾದ ಇಸ್ಫಾನ್, ಖೊಮ್, ಕರಾಜ್ ಹಾಗೂ ಕೆರ್ಮಾನ್‌ಶಾದಲ್ಲಿ ಕೂಡ ಸ್ಫೋಟಗಳು ಸಂಭವಿಸಿದವು. ದಾಳಿಯ ಬೆನ್ನಲ್ಲೇ, ಇಡೀ ಇರಾನ್‌ನಲ್ಲಿ ಪ್ರಮುಖ ಸ್ಥಳಗಳಲ್ಲಿ ಸೈರನ್‌ಗಳು ಮೊಳಗಿದವು.
ದಾಳಿಯ ಬಳಿಕ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಎಂದು ಅಲ್ಲಿನ ‘ತಾನ್ಸಿಮ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಹಿರಿಯ ಸೇನಾಧಿಕಾರಿಗಳು ಹಾಗೂ ರಾಜಕಾರಣಿಗಳು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ದಾಳಿಯ ಸಮಯದಲ್ಲಿ ಇರಾನಿಯನ್ನರು ರಕ್ಷಣೆ ಪಡೆಯಬೇಕು ಎಂದು ಕೋರಿದ್ದಾರೆ.
‘ಕೆಲ ನಿಮಿಷಗಳ ಹಿಂದೆ ಅಮೆರಿಕ ಸೇನಾ ಪಡೆಯು ಇರಾನ್‌ನ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದೆ. ಇರಾನ್‌ನ ಸರ್ಕಾರದಿಂಧ ಎದುರಾಗುವ ಬೆದರಿಕೆಗಳನ್ನು ಮಟ್ಟಹಾಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ನಮ್ಮ ಕೆಲಸ ಮುಗಿದ ಮೇಲೆ ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಬೇಕು’ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
‘ದಬ್ಬಾಳಿಕೆಯ ನೊಗವನ್ನು ಕಿತ್ತೊಗೆದು ಮುಕ್ತ ಹಾಗೂ ಶಾಂತಿಯುತ ಇರಾನ್ ನಿರ್ಮಾಣಕ್ಕೆ ಇರಾನ್‌ನ ಎಲ್ಲ ನಾಗರಿಕರು ಕೈ ಜೋಡಿಸಬೇಕು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದಾರೆ.
‘ದಾಳಿಗೆ ಕೈ ಜೋಡಿಸಿದ ಟ್ರಂಪ್‌ಗೆ ಧನ್ಯವಾದ ಸಲ್ಲಿಸಿದ ಅವರು, ಮಾನವ ಕುಲಕ್ಕೆ ಕಂಟಕಪ್ರಾಯವಾಗಿರುವ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರಬಾರದು’ ಎಂದು ಹೇಳಿದ್ದಾರೆ.
‘ನಮ್ಮ ಜಂಟಿ ಕಾರ್ಯಾಚರಣೆಯಿಂದ ಧೈರ್ಯಶಾಲಿ ಇರಾನ್‌ನ ಜನರು ತಮ್ಮ ಹಣೆಬರಹವನ್ನು ತಾವೇ ಕೈಗೆ ತೆಗೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.
‘ಇಸ್ರೇಲ್‌ನಲ್ಲಿ ವಿಶೇಷ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಘೋಷಿಸಿದ್ದಾರೆ.
ಇರಾನ್ ದಾಳಿಯ ಬೆನ್ನಲ್ಲೇ, ಕತಾರ್, ಯುಎಇನಲ್ಲಿರುವ ರಾಯಭಾರ ಕಚೇರಿಯ ಸಿಬ್ಬಂದಿಗೆ ಅಡಗುದಾಣಗಳಲ್ಲಿ ಆಶ್ರಯ ಪಡೆಯುವಂತೆ ಇಸ್ರೇಲ್ ಹಾಗೂ ಅಮೆರಿಕ ಸೂಚನೆ ನೀಡಿವೆ.
ತಾಯ್ನಾಡನ್ನು ರಕ್ಷಿಸಿಕೊಳ್ಳುವ ಹಾಗೂ ಶತ್ರು ಸೇನೆಯ ದಾಳಿಗಳನ್ನು ಎದುರಿಸುವ ಸಮಯ ಬಂದಿದೆ. ದೇಶವು ಯಾವುದಕ್ಕೂ ಹಿಂಜರಿಯುವುದಿಲ್ಲಇರಾನ್ ವಿದೇಶಾಂಗ ಇಲಾಖೆ
ಅಮೆರಿಕ–ಇಸ್ರೇಲ್ ತನ್ನ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಪ್ರತಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಅರೆಸೇನಾ ಪಡೆ ರೆವಲ್ಯೂಷನರಿ ಗಾರ್ಡ್ಸ್ ತಿಳಿಸಿದೆ.
ಇರಾನ್ ದಾಳಿಯ ಮುನ್ಸೂಚನೆ ಬೆನ್ನಲ್ಲೇ ಇಸ್ರೇಲ್‌ನಾದ್ಯಂತ ಮುನ್ನೆಚ್ಚರಿಕೆ ಘೋಷಿಸಲಾಯಿತು. ತನ್ನ ರಾಜಧಾನಿ ಮನಮಾದಲ್ಲಿರುವ ಅಮೆರಿಕ ನೌಕಾ ಪಡೆಯ ಕೇಂದ್ರ ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಬಹರೇನ್ ತಿಳಿಸಿದೆ. ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ (ಯುಎಇ) ಅಲ್ ದಫ್ರ ಏರ್‌ಬೇಸ್ ದುಬೈನ ಜೆಬೆಲ್ ಅಲಿ ಪೋರ್ಟ್ ದೋಹಾದ ಅಲ್ ಉದೈದ್ ಏರ್‌ಬೇಸ್ ರಿಯಾದ್ ಪಟ್ಟಣಗಳ ಮೇಲೂ ಇರಾನ್ ತೀವ್ರತರವಾದ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಇರಾನ್‌ನ ತೀವ್ರತರದ ಕ್ಷಿಪಣಿ ಡ್ರೋನ್ ದಾಳಿಯ ಬಳಿಕ ಯುಎಇ ಕೂಡ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಜೋರ್ಡನ್‌ನಲ್ಲಿ ಸೈರನ್‌ಗಳು ಮೊಳಗಿದವು. ‘ಕುವೈತ್‌ನಲ್ಲಿರುವ ಅಲಿ ಅಲ್ ಸಲೇಂ ಏರ್‌ಬೇಸ್ ಗುರಿಯಾಗಿರಿಸಿ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿಗಳನ್ನು ಕುವೈತ್‌ನ ವಾಯುರಕ್ಷಣಾ ಪಡೆಯು ಯಶಸ್ವಿಯಾಗಿ ತಡೆದಿದೆ’ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೌದ್ ಅಬ್ದುಲ್‌ಅಜೀಜ್ ಅಲ್– ಅತ್ವಾನ್ ತಿಳಿಸಿದ್ದಾರೆ.
ಇರಾನ್‌ಗೆ ಹುಥಿಗಳ ಬೆಂಬಲ: ‘ಇರಾನ್ ಬೆಂಬಲಿತ ಯೆಮನ್‌ನ ಹುಥಿ ಬಂಡುಕೋರರು ಕೆಂಪು ಸಮುದ್ರದಲ್ಲಿ ದಾಳಿ ಪುನರಾರಂಭಿಸಿದ್ದು ಇಸ್ರೇಲ್ ಮೇಲೂ ದಾಳಿ ನಡೆಸಿದ್ದೇವೆ’ ಎಂದು ಹುಥಿ ಸಂಘಟನೆಯ ಇಬ್ಬರು ಪ್ರಮುಖ ಮುಖಂಡರು ಖಚಿತಪಡಿಸಿದ್ದಾರೆ.
ಟೆಹರಾನ್: ದಕ್ಷಿಣ ಇರಾನ್‌ನ ಹೊರ್ಮ್‌ಜ್‌ಗನ್ ಪ್ರಾಂತ್ಯದ ಮಿನಾಬ್ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ನಡೆಸಿದ ಸೇನಾ ದಾಳಿಯಲ್ಲಿ ಮಕ್ಕಳು ಸೇರಿದಂತೆ 53 ಮಂದಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿಯರ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಮೃತಪಟ್ಟವರಲ್ಲಿ ಮಕ್ಕಳೇ ಹೆಚ್ಚಿದ್ದಾರೆ ಎಂದು ಅಲ್ ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ. ಶಾಲೆಯ ಮೇಲೆ ಮೂರು ಕ್ಷಿಪಣಿ ದಾಳಿ ನಡೆದಿದ್ದು ಅವಶೇಷಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ದಾಳಿಯಲ್ಲಿ 63ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಇರಾನ್‌ನ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಹತಾಮಿ ಕೂಡ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಇರಾನ್‌ನ ಮಾಧ್ಯಮಗಳು ಖಚಿತಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.