
ದುಬೈ: ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಮೇಲೆ ಇರಾನ್ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ.
ಯುದ್ಧವು ಈಗ ಮಧ್ಯ ಪ್ರಾಚ್ಯದಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳಿಗೂ ಹರಡಿದ್ದು, ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ಮಾಡಿದೆ. ಅಮೆರಿಕದೊಂದಿಗೆ ಸೇರಿ ಇರಾನ್‌ನಲ್ಲಿನ ಗುರಿಗಳ ಮೇಲೆ ಭಾರಿ ದಾಳಿ ನಡೆಸಿದೆ.
ಮೂವರ ಸಾವು: ಇರಾನ್‌ನ ಪಶ್ಚಿಮ ನಗರವಾದ ಸನಂದಜ್‌ನಲ್ಲಿ ಸೋಮವಾರ ಮುಂಜಾನೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
‘ಕುವೈತ್‌ನಲ್ಲಿ ಸೋಮವಾರ ಅಮೆರಿಕದ ಕೆಲ ಯುದ್ಧವಿಮಾನಗಳು ಪತನಗೊಂಡಿದ್ದು, ಎಲ್ಲ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ’ ಎಂದು ಕುವೈತ್ ರಕ್ಷಣಾ ಸಚಿವಾಲಯ ತಿಳಿಸಿದೆ.
‘ಇರಾನ್‌ನೊಂದಿಗಿನ ಯುದ್ಧ ಮುಂದುವರಿಯುವವರೆಗೆ ಮಾನವೀಯ ನೆರವು ಅಗತ್ಯವಿರುವ ಗಾಜಾಕ್ಕೆ ಹೋಗುವ ಮಾರ್ಗಗಳನ್ನು ಮುಚ್ಚಲಾಗಿದೆ’ ಎಂದು ಇಸ್ರೇಲ್ ಹೇಳಿದೆ.
‘ಟರ್ಕಿ ಗಡಿ ತಾತ್ಕಾಲಿಕ ಬಂದ್’
ಇರಾನ್‌ನಲ್ಲಿನ ಉದ್ವಿಗ್ನತೆಯಿಂದಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗಬಹುದೆಂಬ ಕಾರಣದಿಂದ ‘ಅಲ್ಪಾವಧಿಯ ಪ್ರವಾಸಕ್ಕಾಗಿ ಬರುವ ಇರಾನಿಯನ್ನರಿಗೆ ನಮ್ಮ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಟರ್ಕಿಯ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಇರಾನ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಟರ್ಕಿ ತನ್ನ ಸ್ವಂತ ನಾಗರಿಕರು ಮತ್ತು ಮೂರನೇ ದೇಶದ ಪ್ರಜೆಗಳಿಗೆ ಇರಾನ್‌ನಿಂದ ಪ್ರವೇಶಿಸಲು ಅನುಮತಿಸುತ್ತಿದೆ. ಆದರೆ ಇರಾನಿಯನ್ನರ ಅಲ್ಪಾವಧಿಯ ಪ್ರವಾಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
‘ಟರ್ಕಿ ಮತ್ತು ಇರಾನ್ ನಡುವಿನ ವಾಣಿಜ್ಯ ಸರಕು ಸಾಗಣೆಯು ನಿಯಂತ್ರಿತ ರೀತಿಯಲ್ಲಿ ಮುಂದುವರಿಯುತ್ತಿದೆ’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.